ಮಂಡ್ಯ: ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಎಲ್ಲ ಸಮಾಜಗಳು ಒಂದುಗೂಡಿ ಈ ಸೌಹಾರ್ದ ಸಂಘ ಕಟ್ಟಿದ್ದೇವೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ ಅಧ್ಯಕ್ಷ ಜಿ.ನಂಜನಗೌಡ ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಸಂಪರ್ಕ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೌಹಾರ್ದ ಸಂಘಗಳ ಸಮಸ್ಯೆಗಳನ್ನು ಇಂದು ನಡೆದ ಸಭೆಯಲ್ಲಿ ಆಲಿಸಲಾಗಿದೆ. ಈ ಸಭೆಯ ವಿಷಯಗಳನ್ನು ಮಹಾಜನ್ ಸಭೆಯಲ್ಲಿ ಚರ್ಚೆಗೆ ಇಡಲಾಗುವುದು. ಅಲ್ಲಿ ತೀರ್ಮಾನಿಸಿ ಕ್ರಮ ವಹಿಸಲು ಒತ್ತಾಯಿಸಲಾಗುವುದು. ಅಂತೆಯೇ ಆ.23ರಂದು ನಡೆಯುವ ಸೌಹಾರ್ದ ಮಹಾಜನ್ ಸಭೆಗೆ ಪ್ರತಿನಿಧಿಗಳು ಭಾಗವಹಿಸಬೇಕು. ಸಂಘದ ಸದಸ್ಯರ ಹಣವನ್ನು ಭದ್ರತೆ ಮಾಡಿಕೊಳ್ಳಲಾಗುವುದು. ಇದರಲ್ಲಿ ಆತಂಕ ಬೇಡ, ಧೈರ್ಯವಾಗಿ ಎಲ್ಲರೂ ಹಣವನ್ನು ಕಟ್ಟಿ ಸಂಘದ ಯಶಸ್ವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ನಿರ್ದೇಶಕ ಎಸ್.ಕೆ.ಮಂಜುನಾಥ್, ಸೌಹಾರ್ದ ಸಂಘ ಉತ್ತಮ ರೀತಿಯಲ್ಲಿ ನಡೆಯಬೇಕು. ಯಾವುದೇ ಕಪ್ಪುಚುಕ್ಕೆ ಬರದಂತೆ ಎಲ್ಲರೂ ನೋಡಿಕೊಳ್ಳುವುದು ಮುಖ್ಯವಾಗಬೇಕು. ನಮ್ಮ ಸಂಘದ ಸದಸ್ಯತ್ವಕ್ಕೆ ಒತ್ತಡ ತರುವಂತಹ ಕೆಲಸಗಳು ಸಂಘದಲ್ಲಿ ಉತ್ತಮವಾಗಿ ನಡೆಯಬೇಕು. ಆ ನಿಟ್ಟಿನಲ್ಲಿ ಸಂಘದ ಕೆಲಸಗಳು ನಡೆಯಲಿ, ಸಹಕಾರ ಸಂಘಗಳು ಸಮುದಾಯದ ಆಸ್ತಿಯಾಗಿದೆ ಅದನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಘದ ನಿರ್ದೇಶಕಿ ಭಾರತಿ ಜಿ.ಭಟ್, ಎಸ್.ನಾಗರಾಜು, ಬಿ.ಟಿ.ಗುರುರಾಜ್, ಎಚ್.ಎಂ.ಬಸವರಾಜ್, ಎನ್.ಬಲರಾಮ್, ಗುರುಪ್ರಸಾದ್ ಬಂಗೇರ ಇದ್ದರು.