ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ
ವಿವಿಧ ಯೋಜನೆಗಳ ಅನುದಾನದಲ್ಲಿ ಹಾಗೂ ಖಾಸಗಿ ಸಂಸ್ಥೆಗಳ ನೆರವಿನಲ್ಲಿ ನೀರು ಶುದ್ಧೀಕರಣ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಯೋಜನೆ ಪೂರ್ಣಗೊಂಡ ನಂತರ ನಿರ್ವಹಣೆ ಸಮಸ್ಯೆ ಪರಿಣಾಮ ಬಹುತೇಕ ಘಟಕಗಳು ದುರಸ್ತಿಗೆ ಬಂದಿದೆ. ನಿರ್ವಹಣೆಗೆ ಅನುದಾನದ ಪ್ರಶ್ನೆ ಎದುರಾಗಿದ್ದು, ಅನೇಕ ಘಟಕಗಳು ದುರಸ್ತಿಗೆ ಬಂದಿವೆ. ಹೋಬಳಿಯ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಎಂಟು ನೀರು ಶುದ್ಧೀಕರಣ ಘಟಕಗಳಲ್ಲಿ ನಾಲ್ಕು ಕೆಟ್ಟುಹೋಗಿದ್ದು, ಜನತೆ ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.
ಜನರಿಗೆ ಅನುಕೂಲವಾಗುವಂತೆ ಕೈಲಾಂಚ ಹೋಬಳಿಯ ಕೂನಗಲ್, ತುಂಬೇನಹಳ್ಳಿ, ಕೆ.ಪಿ. ದೊಡ್ಡಿ, ಹುಣಸನಹಳ್ಳಿ, ಮೊಟ್ಟೆದೊಡ್ಡಿ, ದಾಸರಹಳ್ಳಿ, ಅಚ್ಚಲು, ದಾಸೇಗೌಡನದೊಡ್ಡಿ ಗ್ರಾಮಗಳಲ್ಲಿ ಶುದ್ಧ ನೀರನ ಘಟಕ ನಿರ್ಮಿಸಲಾಗಿದೆ. ದಾಸರಹಳ್ಳಿಯಲ್ಲಿ ಖಾಸಗಿ ಸಂಸ್ಥೆಯಿಂದ ಉಳಿದೆಡೆ ಜಿಲ್ಲಾ ಪಂಚಾಯಿತಿ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗಿದೆ. ಆದರೆ ಈ ಘಟಕಗಳನ್ನು ಗ್ರಾಮ ಪಂಚಾಯಿತಿ ಸುಪರ್ದಿಗೆ ಹಸ್ತಾಂತರಿಸಿಲ್ಲ. ಏಜೆನ್ಸಿಗಳ ಮೂಲಕ ನಿರ್ಮಿಸಿರುವ ಘಟಕಗಳನ್ನು ಇಂತಿಷ್ಟು ವರ್ಷ ನಿರ್ವಹಣೆ ಮಾಡುವಂತೆ ಅವರಿಗೆ ಜವಾಬ್ದಾರಿ ನೀಡಲಾಗಿದೆ.
ಖಾಸಗಿ ಸಂಸ್ಥೆಗಳು ನಿರ್ಮಿಸಿರುವ ಘಟಕಗಳನ್ನು ಅವರೇ ನಿರ್ವಹಣೆ ಮಾಡುತ್ತಿದ್ದಾರೆ. ಅಲ್ಲೊಂದು ಇಲ್ಲೊಂದು ಘಟಕವನ್ನು ಗ್ರಾಪಂ ಗ್ರಾಮೀಣಾಭಿವೃದ್ಧಿ ಕುಡಿಯುವ ನೀರು ನೈರ್ಮಲ್ಯ ಇಲಾಖೆಗಳು ನಿರ್ವಹಣೆ ಮಾಡುತ್ತಿವೆ. ಆದರೆ, ಈ ನೀರಿನ ಘಟಕಗಳು ಆಗಾಗ ಕೆಟ್ಟುಹೋಗುತ್ತಿದ್ದು, 2-3 ತಿಂಗಳು ಕಳೆದರೂ ದುರಸ್ತಿಯಾಗುತ್ತಿಲ್ಲ.
ಗ್ರಾಪಂ, ಜಿಪಂಗೂ ಟಕಗಳ ಸಮಸ್ಯೆ ಬಗ್ಗೆ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಕೆಟ್ಟಿರುವ ಘಟಕಗಳನ್ನು ಕೂಡಲೇ ರಿಪೇರಿ ಮಾಡಿಸಿ ನಿಗದಿತವಾಗಿ ನಿರ್ವಹಣೆ ಮಾಡಿ ನೀರು ಪೂರೈಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೆ.ಪಿ. ದೊಡ್ಡಿ, ದಾಸರಹಳ್ಳಿ, ಕೂನಗಲ್, ದಾಸೇಗೌಡನದೊಡ್ಡಿ ಗ್ರಾಮಗಳ ಟಕಗಳು ಕೆಟ್ಟು ಹೋಗಿವೆ. ತುಂಬೇನಹಳ್ಳಿ ಘಟಕ ಸರಿಯಿದ್ದರೂ ನೀರು ಬಳಕೆಗೆ ಯೋಗ್ಯವಿಲ್ಲದ ಕಾರಣ ಜನರಿಂದ ದೂರವಾಗಿದೆ. ಅಕ್ಕಪಕ್ಕದ ಗ್ರಾಮಗಳಲ್ಲೂ ಘಟಕಗಳು ಕೆಟ್ಟುಹೋಗಿದ್ದು, ಹತ್ತಿರದಲ್ಲಿ ಶುದ್ಧನಿರು ಘಟಕಗಳು ಇಲ್ಲದೆ ಜನರು ಬೋರ್ವೆಲ್ ನೀರನ್ನೇ ಆಶ್ರಯಿಸಬೇಕಿದೆ. ಅಂತರ್ಜಲ ಮಟ್ಟವೂ ಕುಸಿದಿದ್ದು, ಬೋರ್ವೆಲ್ಗಳಲ್ಲಿ 800ರಿಂದ 1000 ಅಡಿ ಆಳದಲ್ಲಿ ನೀರು ಲಭ್ಯವಿದ್ದು, ಇದು ಕೂಡ ಫ್ಲೋರೈಡ್ಯುಕ್ತವಾಗಿದೆ. ಇದೇ ನೀರನ್ನು ಜನರು ಬಳಸಬೇಕಿದೆ. ಇಂಥ ಅವ್ಯವಸ್ಥೆ ಪರಿಣಾಮ ಜನರಿಗೆ ಶುದ್ಧ ಕುಡಿಯುವ ನೀರು ಸಿಗಬೇಕೆಂಬ ಪರಿಕಲ್ಪನೆ ಇಲ್ಲದಂತಾಗಿದೆ.
ಬಹುತೇಕ ಕಡೆ ಶುದ್ಧ ಕುಡಿಯುವ ನೀರನ ಘಟಕಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡದ ಕಾರಣ ಹಾಳಾಗಿದ್ದು, ಟಕಗಳನ್ನು ನಿರ್ಮಾಣ ಮಾಡಿದರು ಉಪಯೋಗಕ್ಕಿಲ್ಲ ಎನ್ನುವಂತಾಗಿದೆ. ಈ ಸಮಸ್ಯೆ ಬಗ್ಗೆ ಕೆಲವು ಜಿಲ್ಲೆಗಳ ಕೆಡಿಪಿ ಸಭೆಗಳಲ್ಲಿ ಚರ್ಚೆಯಾಗಿದ್ದು, ಶುದ್ಧ ಕುಡಿವ ನೀರಿನ ಘಟಕಗಳನ್ನು ಯಾವುದೇ ಅನುದಾನದಲ್ಲಿ ನಿರ್ಮಿಸಿದ್ದರೂ ಪೂರ್ಣಗೊಂಡ ನಂತರ ಸ್ಥಳಿಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ. ಆದರೆ ಈ ಆದೇಶ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಕೆ.ಪಿ. ದೊಡ್ಡಿ ನೀರಿನ ಘಟಕ ಮೂರು ತಿಂಗಳ ಹಿಂದಷ್ಟೆ ರಿಪೇರಿ ಕಂಡಿತ್ತು. ಆದರೆ ಒಂದು ತಿಂಗಳೂ ಸರಿಯಾಗಿ ಕಾರ್ಯ ನಿರ್ವಹಿಸಲಿಲ್ಲ. ಮತ್ತೆ ಯಥಾಸ್ಥಿತಿ ತಲುಪಿದೆ. ಹತ್ತಿರದಲ್ಲಿ ಬೇರೆ ನೀರಿನ ಘಟಕ ಇಲ್ಲದ ಕಾರಣ ಕುಡಿಯುವ ಗ್ರಾಮಸ್ಥರು ನೀರಿಗಾಗಿ ದೂರದ ಊರುಗಳಿಗೆ ಹೋಗಬೇಕಿದೆ ಎನ್ನುತ್ತಾರೆ ಗ್ರಾಮದ ಗೋಪಾಲ್.
ಕೆ.ಪಿ. ದೊಡ್ಡಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದೂ ಇಲ್ಲದಂತಾಗಿದೆ. ಆಗಾಗ ಕೆಟ್ಟುಹೋಗುತ್ತಿದೆ. ಈ ಘಟಕದ ನಿರ್ವಹಣೆಯನ್ನು ಜಿಪಂ ಖಾಸಗಿ ಏಜೆನ್ಸಿಗೆ ನೀಡಿದ್ದು, ಗುತ್ತಿಗೆ ಪಡೆದಿರುವ ಏಜೆನ್ಸಿಯವರು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು ಸಮಸ್ಯೆಗೆ ಕಾರಣವಾಗಿದೆ. ಸಂಬಂಧಪಟ್ಟ ಇಲಾಖೆಯವರು ಅಗತ್ಯ ಕ್ರಮ ಕೈಗೊಂಡು ಘಟಕಗಳ ನಿರ್ವಹಣೆ ಮುಂದಾಗಬೇಕಿದೆ. ಪ್ರಕಾಶ್, ಗ್ರಾಪಂ ಸದಸ್ಯ, ಕೆ.ಪಿ. ದೊಡ್ಡಿ
ಗ್ರಾಪಂ ವ್ಯಾಪ್ತಿಯಲ್ಲಿ ಖಾಸಗಿ ಏಜೆನ್ಸಿ ಮೂಲಕ ಹೆಚ್ಚಿನ ಘಟಕಗಳು ನಿರ್ಮಾಣ ಆಗಿವೆ. ವಿದ್ಯುಚ್ಚಕ್ತಿ ಬಿಲ್ ಬಾಕಿ ಸೇರಿ ಘಟಕ ನಿರ್ವಹಣೆ ಸರಿಯಾಗಿ ಮಾಡದಿರುವುದರಿಂದ ಸಮಸ್ಯೆ ಉಂಟಾಗಿದೆ. ಖಾಸಗಿ ಕಂಪನಿ ಮತ್ತು ಸಂಬಂಧಪಟ್ಟ ಇಲಾಖೆಗೆ ಗ್ರಾಪಂ ಮೂಲಕ ಪತ್ರ ಬರೆದು ಘಟಕ ರಿಪೇರಿ ಮಾಡಿಸಿ ಸೂಕ್ತ ನಿರ್ವಹಣೆ ಮಾಡುವಂತೆ ತಿಳಿಸಲಾಗಿದೆ.
ಪುಟ್ಟಸ್ವಾಮಿ, ಗ್ರಾಪಂ ಅಧ್ಯಕ್ಷ, ಹುಣಸನಹಳ್ಳಿ
ಜಿಪಂ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಸುಪರ್ದಿನಲ್ಲಿರುವ ಘಟಕಗಳು ದುರಸ್ತಿಯಾದ ತಕ್ಷಣ ನಿರ್ವಹಣೆ ಮಾಡಲಾಗುವುದು. ಖಾಸಗಿಯಾಗಿ ನಿರ್ಮಾಣ ಮಾಡಿ, ಇಲಾಖೆಗೆ ಅಥವಾ ಗ್ರಾಪಂ ಹಸ್ತಾಂತರವಾಗದಿರುವ ಘಟಕಗಳನ್ನು ನಿರ್ಮಾಣ ಮಾಡಿದ ಕಂಪನಿಗಳೇ ನಿರ್ವಹಣೆ ಮಾಡಬೇಕಿದೆ. ಒಂದೆರಡು ದಿನಗಳಲ್ಲಿ ಕೆ.ಪಿ. ದೊಡ್ಡಿ ನೀರಿನ ಘಟಕ ರಿಪೇರಿಯಾಗಲಿದೆ. ಮಧುಸೂಧನ್, ಎಇಇ, ಜಿಪಂ ಕುಡಿಯುವ ನೀರು ನೈರ್ಮಲ್ಯ ಇಲಾಖೆ, ರಾಮನಗರ