ಎಳನೀರು ದುಬಾರಿ 
ಜಿಲ್ಲೆ

ಇಳುವರಿ ಕುಸಿತ ಎಳನೀರು ದುಬಾರಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ರಾಜ್ಯದಲ್ಲಿ ಭೀಕರ ಬರಗಾಲದಿಂದಾಗಿ ಎಳನೀರು ಇಳುವರಿಯಲ್ಲಿ ಭಾರಿ ಕುಸಿತ ಕಂಡಿದ್ದು, ದರ ದಿಢೀರ್ ಏರಿಕೆಯಾಗಿದೆ. ನಾಲ್ಕೈದು ವರ್ಷಕ್ಕೆ ಹೋಲಿಸಿದರೆ ಈ ಬಾರಿ ದೇವನಹಳ್ಳಿ ಭಾಗದಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ಏರಿಕೆಯಾಗುತ್ತಿದ್ದ ಎಳನೀರು ಮಳೆಗಾಲದಲ್ಲೇ ಏರಿಕೆ ಕಂಡಿರುವುದು ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸುತ್ತಿದೆ. ಸಾಮಾನ್ಯ ದಿನಗಳಲ್ಲಿ 25 ರಿಂದ 35 ರೂ.ವರೆಗೆ ಇರುತ್ತಿದ್ದ ದರ ಏಕಾಏಕಿ 45ರಿಂದ 50 ರೂ. ಆಗಿದೆ. ಗುಣಮಟ್ಟದ ಎಳನೀರು ಇನ್ನೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ.

ಕೊಬ್ಬರಿ, ಕಾಯಿಯೂ ದುಬಾರಿ: ತೆಂಗಿನಕಾಯಿ ಹಾಗೂ ಕೊಬ್ಬರಿ ದರವೂ ಏರಿಕೆಯಾಗುತ್ತಿದೆ. ಬೀದಿ ಬದಿಗಳಲ್ಲಿ ಎಲ್ಲೆಂದರಲ್ಲಿ ಕಾಣುತ್ತಿದ್ದ ಎಳನೀರು ವ್ಯಾಪಾರವೂ ಗಣನೀಯವಾಗಿ ತಗ್ಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಎಳನೀರು ಖರೀದಿಸುವುದೇ ಕಷ್ಟಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಎಳನೀರು ಮಂಡಿಗಳಲ್ಲೂ ಗುಣಮಟ್ಟದ ಎಳನೀರು ಸಿಗುತ್ತಿಲ್ಲ. ಮಂಡಿಗಳಲ್ಲಿ ಬೆಲೆ ಏರಿಕೆಯಾಗಿರುವುದರಿಂದ ಬಿಡಿ ವ್ಯಾಪಾರಿಗಳು ಸಾಗಣೆ ವೆಚ್ಚ ಸೇರಿಸಿ ಮತ್ತಷ್ಟು ಹೆಚ್ಚಿನ ದರಕ್ಕೆ ವ್ಯಾಪಾರಕ್ಕಿಳಿದಿರುವುದು ಕಂಡುಬರುತ್ತಿದೆ.

ಕೂಲಿ ದುಬಾರಿ: ಮರದಿಂದ ಎಳನೀರು ಇಳಿಸುವ ಕೂಲಿಕಾರ್ಮಿಕರು ಸಿಗುತ್ತಿಲ್ಲ. ಸಿಕ್ಕರೂ ದುಬಾರಿ ದರ ಕೇಳುತ್ತಿದ್ದಾರೆ. ಒಂದು ಎಳನೀರಿಗೆ ಏಳೆಂಟು ರೂಪಾಯಿ ನೀಡಬೇಕಾಗಿದೆ. ದೊಡ್ಡ ಮರವಾದರೆ ಇನ್ನೂ ಹೆಚ್ಚು ಕೇಳುತ್ತಾರೆ. ಎಳನೀರು ಇಳಿಸಲು ಕೂಲಿ ಸೇರಿ ಅದರ ಸಾಗಣೆ ವೆಚ್ಚ ಕಳೆದು ಲಾಭ ಕಾಣುವುದು ಕಷ್ಟವಾಗಿದೆ. ಇದರೊಂದಿಗೆ ಮಧ್ಯವರ್ತಿಗಳ ಕಾರುಬಾರಿನಿಂದ ಎಳನೀರು ಮಾರುಕಟ್ಟೆ ಸೇರುವುದರೊಳಗೆ 40 ರೂಪಾಯಿ ಆಗುತ್ತಿದೆ. ವಿಧಿ ಇಲ್ಲದೆ ದರ ಏರಿಸಬೇಕಾಗಿದೆ ಎಂಬುದು ವ್ಯಾಪಾರಿಗಳ ಮಾತಾಗಿದೆ.

ಎಲ್ಲ ಕಾಲದಲ್ಲೂ ದೊರಕುವ ಎಳನೀರು ಸರ್ವರೋಗಕ್ಕೂ ಅಮೃತವಿದ್ದಂತೆ, ಎಳನೀರನ್ನು ಚಿಕ್ಕಬಳ್ಳಾಪುರ, ಗೌರಿಬಿದನೂರು, ಮಂಚೇನಹಳ್ಳಿ, ದೊಡ್ಡಬಳ್ಳಾಪುರ ಕಡೆಗಳಿಂದ ಖರೀದಿಸಿಕೊಂಡು ಬರುತ್ತಿದ್ದೇವೆ. ದರ ದುಬಾರಿಯಾಗಿದ್ದರಿಂದ ಗ್ರಾಹಕರೂ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.
ಕೃಷ್ಣಪ್ಪ. ಎಳನೀರು ವ್ಯಾಪಾರಿ
ಮಳೆ ಇಲ್ಲದೆ ತೆಂಗಿನ ಮರಗಳಲ್ಲಿ ಇಳುವರಿ ಕುಸಿತ ಕಂಡಿದೆ, ದೂರದೂರುಗಳಿಂದ ಎಳನೀರು ಖರೀದಿಗೆ ಹರಸಾಹಸ ಮಾಡಬೇಕಾಗಿದೆ, ಮರಗಳಿಂದ ಸಲು ಇಳಿಸಲು ಕೂಲಿಕಾರ್ಮಿಕರೂ ಸಿಗುತ್ತಿಲ್ಲ. ಇದೆಲ್ಲ ಸಮಸ್ಯೆಗಳಿದ್ದರೂ ಎಳನೀರಿನ ವ್ಯಾಪಾರವನ್ನೇ ನೆಚ್ಚಿಕೊಂಡು ಜೀವನ ಮಾಡುತ್ತಿದ್ದೇವೆ. ದರ ಏರಿಕೆಯಿಂದ ವ್ಯಾಪಾರಕ್ಕೂ ಕುತ್ತು ಬಂದಿದೆ.
ಮುನಿಯಪ್ಪ, ಎಳನೀರು ವ್ಯಾಪಾರಿ