ಜಿಲ್ಲೆ

‘ಸ್ವಾತಂತ್ರ್ಯ ರೈಲು ಗಾಡಿ- ನಿಲ್ದಾಣಗಳು’ ಸಮಾರೋಪ, ಸಂಸ್ಕೃತಿ ಮತ್ತು ಸಾಧನೆಗಳ ವೈಭವ

ಧಾರವಾಡ: ರೈಲ್ವೆ ಇಲಾಖೆ ಆಯೋಜಿಸಿದ್ದ ‘ಸ್ವಾತಂತ್ರ್ಯ ರೈಲು ಗಾಡಿ ಮತ್ತು ನಿಲ್ದಾಣಗಳು’ ಕಾರ್ಯಕ್ರಮದ ಸಮಾರೋಪ ನಗರದ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಜರುಗಿತು.

75 ವರ್ಷಗಳ ಸ್ವಾತಂತ್ರ್ಯ ಮತ್ತು ದೇಶದ ಜನರು, ಸಂಸ್ಕೃತಿ ಮತ್ತು ಸಾಧನೆಗಳ ವೈಭವದ ಇತಿಹಾಸ ಸ್ಮರಿಸುವ ‘ಸ್ವಾತಂತ್ರ್ಯ ಅಮೃತ ಮಹೋತ್ಸವ’ ಆಚರಣೆಯ ಅಂಗವಾಗಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸ್ವಾತಂತ್ರ್ಯ ಹೋರಾಟಗಾರರಾದ ದಿ. ಡಾ. ದೇವೇಂದ್ರಕುಮಾರ್ ಎಸ್. ಹಕಾರಿ ಅವರ ಪತ್ನಿ ಕಸ್ತೂರಿದೇವಿ ಮತ್ತು ಪುತ್ರ ರವಿಶಂಕರ ಡಿ. ಹಕಾರಿ, ದಿ. ಜಗನ್ನಾಥರಾವ್ ಕುಲಕರ್ಣಿ ಅವರ ಪುತ್ರ ದತ್ತರಾಜ ಕುಲಕರ್ಣಿ, ನಿಂಗಯ್ಯ ಡಿ. ಸಿಸಂಬರಿಮಠ, ರಂಗರಾವ್ ಆರ್. ಕುಲಕರ್ಣಿ ಅವರ ಪುತ್ರಿ ಸುಮನಾ ಕುಕನೂರ ಮತ್ತು ಅಳಿಯ ಶ್ರೀಕಾಂತ ಕುಕನೂರ ಹಾಗೂ ಅಪ್ಪಣ್ಣ ಶಿವರಾಯಪ್ಪ ಕರಲಿಂಗಣ್ಣವರ ಪುತ್ರ ರಮೇಶ ಅಪ್ಪಣ್ಣ ಕರಲಿಂಗಣ್ಣವರ ಅವರನ್ನು ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡೆ ಸನ್ಮಾನಿಸಿದರು. ಅಪರ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಂತೋಷಕುಮಾರ್ ವಮಾ, ವರಿಷ್ಠ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಹರೀತಾ ಎಸ್., ಇತರರಿದ್ದರು.

ಮಕ್ಕಳಿಗಾಗಿ ವಾರಪೂರ್ತಿ ಆಯೋಜಿಸಲಾಗಿದ್ದ ದೇಶಭಕ್ತಿ ಗೀತೆ, ರಸಪ್ರಶ್ನೆ, ಚಿತ್ರಕಲೆ, ಘೋಷವಾಕ್ಯ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಅವರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕುಟುಂಬ ಸದಸ್ಯರೊಂದಿಗೆ ದೆಹಲಿಯಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಭಾಗವಹಿಸಿ ಸಂವಾದ ನಡೆಸಿದರು.