ಜಿಲ್ಲೆ

ತ್ಯಾಗ ಬಲಿದಾನಗಳಿಂದ ದೇಶ ಸ್ವಾತಂತ್ರ, ತಹಸೀಲ್ದಾರ್ ಎಂ.ಶ್ರೀನಿವಾಸ್ ಅಭಿಮತ

ನೆಲಮಂಗಲ: ಸ್ವಾತಂತ್ರ್ಯವೆಂದರೆ ಜವಾಬ್ದಾರಿಯೇ ಹೊರತು ಸ್ವೇಚ್ಚಾಚಾರವಲ್ಲ, ಸಮಾಜದ ಪ್ರತಿಯೊಬ್ಬರೂ ಜವಾಬ್ದಾರಿ ಅರಿತು ನಡೆದಾಗ ದೇಶ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ತಹಸೀಲ್ದಾರ್ ಎಂ.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದರು.

ಅನೇಕ ಮಂದಿಯ ತ್ಯಾಗ ಬಲಿದಾನಗಳಿಂದ ದೇಶ ಸ್ವಾತಂತ್ರವಾಗಿದೆ. ಆದರೆ ಕರ್ನಾಟಕದ ಅನೇಕ ಜಿಲ್ಲೆಗಳು ನೆರೆಹಾವಳಿಗೆ ಸಿಲುಕಿ ಸಂಕಷ್ಟದಲ್ಲಿರುವ ಸನ್ನಿವೇಶದಲ್ಲಿ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ನೆರೆಹಾವಳಿಗೆ ಸಂತ್ರಸ್ತರ ಸಹಾಯಕ್ಕೆ ಕೈಜೋಡಿಸಬೇಕು ಎಂದರು.

ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತಾನಾಡಿ,ಸಂಕಷ್ಟದಲ್ಲಿರುವ ಮಂದಿಗೆ ಸಹಾಯಹಸ್ತ ನೀಡುವುದು ದೇಶಪ್ರೇಮದ ಪ್ರತೀಕ, ಗಡಿಯಲ್ಲಿನ ಸೈನಿಕರು, ಅನ್ನದಾತ ರೈತರು, ಪೊಲೀಸ್ ಇಲಾಖೆ ಶ್ರಮ ಸ್ಮರಿಸಬೇಕಿದೆ ಎಂದರು.

2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗಿಣಿರಾಮ ಧಾರವಾಹಿ ಬಾಲನಟಿ ಎಂ.ಬೈರವಿಗೆ ಪ್ರೋತ್ಸಾಹಧನ ನೀಡಲಾಯಿತು.

ತಾಲೂಕಿನಾದ್ಯಂತ ಕರೊನಾ ನಿಯಂತ್ರಿಸಲು ಶ್ರಮಿಸಿದ್ದ ವಿವಿಧ ಇಲಾಖೆಯ ಸುಮಾರು 12 ಮಂದಿ ಕರೊನಾ ಸೇನಾನಿಗಳನ್ನು ಸನ್ಮಾನಿಸಲಾಯಿತು.

ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಸ್.ಮಲ್ಲಯ್ಯ, ಜಿಪಂ ಸದಸ್ಯೆ ಪುಷ್ಪಾ ಸಂಪತ್, ಡಿವೈಎಸ್‌ಪಿ ಬಿ.ಎಸ್.ಮೋಹನ್‌ಕುಮಾರ್, ವೃತ್ತನಿರೀಕ್ಷಕ ಶಿವಣ್ಣ, ತಾಪಂ ಇಒ ಲಕ್ಷ್ಮೀನಾರಾಯಣ್, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ರಂಗನಾಥ್, ತಾಲೂಕು ಆರೋಗ್ಯಾಧಿಕಾರಿ ಹರೀಶ್, ನಗರಯೋಜನಾ ಜಂಟಿ ನಿರ್ದೇಶಕ ಎಸ್.ತಿಮ್ಮೇಗೌಡ, ಪೌರಾಯುಕ್ತ ಎಲ್.ಮಂಜುನಾಥ್‌ಸ್ವಾಮಿ, ಬಿಇಒ ಕೆ.ಸಿ.ರಮೇಶ್, ನಗರಸಭೆೆ ಸದಸ್ಯರಾದ ಕೆ.ಎಂ.ಶಿವಕುಮಾರ್, ಸುನೀಲ್‌ಮೂಡ್, ಲೋಲಾಕ್ಷಿಗಂಗಾಧರ್, ಕಸಾಪ ಅಧ್ಯಕ್ಷ ಉಮೇಶ್‌ಗೌಡ, ರಾಜಸ್ವನಿರೀಕ್ಷಕ ರವಿಕುಮಾರ್ ಮತ್ತಿತರರಿದ್ದರು.