ಜಿಲ್ಲೆ

ಹೋರಾಟಗಾರರ ತ್ಯಾಗದಿಂದ ದೇಶಕ್ಕೆ ಸ್ವಾತಂತ್ರ್ಯ

ಗದಗ: ಹೋರಾಟಗಾರರ ತ್ಯಾಗ, ಬಲಿದಾನದಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆತಿದೆ. ಈ ಸ್ವಾತಂತ್ರ್ಯ್ಕಗ ಅಮೃತ ಮಹೋತ್ಸವದ ಸಂಭ್ರಮ. ಇದರ ಅಂಗವಾಗಿ ಜಿಲ್ಲಾದ್ಯಂತ ಆ. 13 ರಿಂದ 15ರವರೆಗೆ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿಯಾನ ಯಶಸ್ವಿಗೊಳಿಸೋಣ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಅಭಿಯಾನದ ಅಂಗವಾಗಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆ. 13 ರಿಂದ 15ರವರೆಗೆ ನಿರಂತರವಾಗಿ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಬೇಕು. ಜತೆಗೆ ಸರ್ಕಾರಿ, ಅರೆಸರ್ಕಾರಿ, ನಿಗಮ ಮಂಡಳಿ, ಸಾರ್ವಜನಿಕ ಉದ್ಯಮಗಳು, ಸ್ವ ಸಹಾಯ ಗುಂಪುಗಳು, ನಾಗರಿಕ ಸಂಸ್ಥೆಗಳು, ಸಾರ್ವಜನಿಕರು, ಶಾಲಾ- ಕಾಲೇಜುಗಳಲ್ಲಿ ಮಕ್ಕಳು, ಕುಟುಂಬ ವರ್ಗದವರು ಒಳಗೊಂಡಂತೆ ಕ್ರಿಯಾಶೀಲರಾಗಿ ಅಭಿಯಾನದಲ್ಲಿ ಪಾಲ್ಗೊಂಡು ರಾಷ್ಟ್ರ ಪ್ರೇಮ ಅಭಿವ್ಯಕ್ತಿಗೊಳಿಸಬೇಕು ಎಂದರು.
ಅಮೃತ ಮಹೋತ್ಸವ ಸಂಭ್ರಮಕ್ಕೆ ತಳಪಾಯವಾಗಿ ತಮ್ಮ ಜೀವನ ತ್ಯಾಗ ಮಾಡಿದ ಎಲ್ಲರನ್ನೂ ಗೌರವಿಸಿ ಸದಾ ಸ್ಮರಿಸುತ್ತ ಭವ್ಯ ಭಾರತವನ್ನು ಕಟ್ಟಲು ನಮ್ಮ ಜವಾಬ್ದಾರಿಯನ್ನು ಎಲ್ಲರೂ ಸರಿಯಾಗಿ ನಿಭಾಯಿಸೋಣ ಎಂದರು.
ಪ್ರಭಾರಿ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ., ಮಾತನಾಡಿ, ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರಿ ಕಚೇರಿ, ಶಾಲೆ, ಕಾಲೇಜು, ಅಂಗನವಾಡಿ ಸೇರಿ ಎಲ್ಲ ಸರ್ಕಾರಿ ಕಟ್ಟಡಗಳಲ್ಲಿ ಆ. 13 ರಿಂದ 15 ರವರೆಗೆ ನಿತ್ಯ ಬೆಳಗ್ಗೆ 8 ಕ್ಕೆ ಧ್ವಜಾರೋಹಣ ಮಾಡಿ ಸೂರ್ಯಸ್ತದ ವೇಳೆಗೆ ಇಳಿಸಬೇಕು. ಮನೆಗಳಲ್ಲಿ ಮಾತ್ರ ಆ. 13 ರಂದು ಬೆಳಗ್ಗೆ 8ಕ್ಕೆ ಧ್ವಜಾರೋಹಣ ಮಾಡಿ ನಿರಂತರವಾಗಿ ಧ್ವಜ ಹಾರಿಸಿ ಆ. 15ರಂದು ಸಂಜೆ 5 ಗಂಟೆಗೆ ಇಳಿಸಬೇಕು ಎಂದು ಕೋರಿದರು.
ಜಿಲ್ಲಾಡಳಿತ ಭವನದಿಂದ ತ್ರಿವರ್ಣ ಧ್ವಜಗಳೊಂದಿಗೆ ಆರಂಭವಾದ ಹರ್ ಘರ್ ತಿರಂಗಾ ಕಾಲ್ನಡಿಗೆ ಜಾಥಾ ಟಿಪ್ಪು ಸುಲ್ತಾನ್ ವೃತ್ತ, ಮಹಾವೀರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಮೂಲಕ ಸಾಗಿ ಭೀಷ್ಮ ಕೆರೆಯ ಆವರಣದಲ್ಲಿನ ಬಸವೇಶ್ವರ ಪುತ್ಥಳಿಗೆ ಬಂದು ಮುಕ್ತಾಯಗೊಂಡಿತು. ಪ್ರತಿ ವೃತ್ತದಲ್ಲಿಯೂ ಜಿಲ್ಲಾಡಳಿತದ ಅಧಿಕಾರಿ, ಸಿಬ್ಬಂದಿ, ವಿದ್ಯಾರ್ಥಿಗಳು, ಎನ್​ಸಿಸಿ ಕೆಡೆಟ್​ಗಳು ದೇಶ ಭಕ್ತಿ ಘೊಷಣೆ ಕೂಗಿದರು.
ಜಾಥಾದಲ್ಲಿ ಗದಗ- ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಪಲ್ಲೇದ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಿಬ್ಬಂದಿ ಪಾಲ್ಗೊಂಡಿದ್ದರು.