ಜಿಲ್ಲೆ

ಕಳಚಿತು ಸಿದ್ದಾಪುರ ಸ್ವಾತಂತ್ರ್ಯ ಸಂಗ್ರಾಮದ ಕೊನೆಯ ಕೊಂಡಿ

Uttara Kannada - Subash Hegde

ಸಿದ್ದಾಪುರ: ಸ್ವಾತಂತ್ರ್ಯ ಹೋರಾಟಗಾರ, ಬಿಳಗಿಯ ಮಾಧವ ರಾಮಚಂದ್ರ ಪೈ ಕೋಡಿಗದ್ದೆ(99) ಬುಧವಾರ ನಿಧನ ಹೊಂದಿದರು. ಸ್ವಾಯಂತ್ರ್ಯ ಹೋರಾಟಗಾರರ ತವರು ಸಿದ್ದಾಪುರದಲ್ಲಿ ಹೋರಾಟಗಾರರ ಕೊನೆಯ ಕೊಂಡಿ ಕಳಚಿದೆ. ಸಾಗರದಲ್ಲಿ ನೆಲೆಸಿದ್ದ ಅವರಿಗೆ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.
ಬಾಲ್ಯದಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದ ಮಾಧವ ಪೈ ಅವರು ಕಟ್ಟೆಕೈ ಗಾಂಧಿ ಎಂದೇ ಪ್ರಸಿದ್ಧರಾಗಿದ್ದರು. ಬ್ರಿಟಿಷರು ನಾಲ್ಕು ಬಾರಿ ಅವರನ್ನು ಬಂಧಿಸಿ, ಜೈಲಿಗೆ ತಳ್ಳಿದ್ದರು. ಆದರೆ, ಪ್ರತಿ ಬಾರಿಯೂ ಅಪ್ರಾಪ್ತ ಎಂದು ಬಿಡುಗಡೆ ಮಾಡಿದ್ದರು. ಮಾಧವ ಪೈ ಅವರು, ಮಕ್ಕಳ ವಾನರ ಸೇನೆಯ ಮೂಲಕ ಧ್ವಜವಂದನೆ ಮಾಡಿ `ವಂದೇ ಮಾತರಂ' ಹಾಡುವುದು, ಸಾರ್ವಜನಿಕರಿಂದ ಧನ ಸಂಗ್ರಹ ಮಾಡಿ ಗಾಂಧಿಜೀ ಅವರ ಫಂಡ್‌ಗಳಿಗೆ ಹಾಗೂ ರಾಷ್ಟ್ರೀಯ ಶಾಲೆಗಳಿಗೆ ನೀಡುತ್ತಿದ್ದರು. ಅವರು ಸ್ವಾತಂತ್ರ್ಯ ಯೋಧರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊಡುತ್ತಿದ್ದ ಗೌರವ ಪಿಂಚಣಿಯನ್ನು ನಿರಾಕರಿಸಿದ್ದರು. 2023 ರ ಆಗಸ್ಟ 14 ರಂದು ಸಿದ್ದಾಪುರದ ಅನೇಕ ಸಂಘಟನೆಗಳು ಸಾಗರದ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ಮಾಧವ ಪೈ ಅವರನ್ನು ಗೌರವಿಸಿ ಸನ್ಮಾನಿಸಿದ್ದವು.