ಜಿಲ್ಲೆ

ಸ್ವಾತಂತ್ರ್ಯದ ಕತೆ: ಉಪ್ಪು ತಯಾರಿಸಿ ದೇಶದ ಗಮನ ಸೆಳೆದಿದ್ದ ಅಂಕೋಲಾ

Uttara Kannada - Subash Hegde

ಕಾರವಾರ: ಭಾರತ ಸ್ವಾತಂತ್ರಂತ್ರ್ಯ ಹೋರಾಟದ ಇತಿಹಾಸದಲ್ಲಿ ಅಂಕೋಲಾದ ಪುಟ ಅತ್ಯಂತ ಮಹತ್ವ ಪಡೆದಿದೆ. ಇಲ್ಲಿನ ವ್ಯಾಪಾರಿಗಳು, ಉದ್ಯಮಿಗಳು, ರೈತರ ಜತೆ ಮಹಿಳೆಯರೂ ಬ್ರಿಟಿಷರ ವಿರುದ್ಧ ಚಳುವಳಿಯಲ್ಲಿ ಪಾಲ್ಗೊಂಡರು. ದೇಶದ, ರಾಜ್ಯದ ವಿವಿಧೆಡೆ ನಡೆಯುತ್ತಿದ್ದ ಹೋರಾಟಗಳಿಗೆ ಕೈ ಜೋಡಿಸಿದರು. ಕರ ನಿರಾಕರಣೆ ಚಳುವಳಿ, ಉಪ್ಪಿನ ಸತ್ಯಾಗ್ರಹ, ಜಂಗಲ್ ಸತ್ಯಾಗ್ರಹಗಳಲ್ಲಿ ಪಾಲ್ಗೊಂಡು ಕರಾವಳಿಯ ಪುಟ್ಟ ಪಟ್ಟಣಕ್ಕೆ ಕರ್ನಾಟಕದ ಬಾರ್ಡೋಲಿ ಎಂಬ ಹೆಸರು ತಂದರು.

ಉಪ್ಪಿನ ಸತ್ಯಾಗ್ರಹ:

ಗಾಂಧೀಜಿಯವರ ಅಸಹಕಾರ ಚಳುವಳಿಯ ಭಾಗವಾದ ಉಪ್ಪಿನ ಸತ್ಯಾಗ್ರಹವನ್ನ ಕರ್ನಾಟಕದಲ್ಲಿ ನಡೆಸಲು 1930 ರ ಫೆಬ್ರವರಿ 20 ರಂದು ಬಳ್ಳಾರಿಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ನಿರ್ಣಯಿಸಲಾಯಿತು. ಜಲಿಯನ್‌ವಾಲಾಭಾಗ್ ಹತ್ಯಾಕಾಂಡ ನಡೆದ ಏ.13 ರಂದು ಅಂಕೋಲಾದ ಉಪ್ಪಿನ ಸತ್ಯಾಗ್ರಹಕ್ಕೆ ದಿನ ನಿಗದಿ ಮಾಡಲಾಯಿತು.

ನಿಗದಿತ ದಿನದಂದು ಆನಂದಿಬಾಯಿ ದತ್ತು ನಾರ್ವೇಕರ್ ಅವರ ಮನೆಯಿಂದ ಮೆರವಣಿಗೆ ಹೊರಟಿತ್ತು. ವಂದಿಗೆ, ಶೆಟಗೇರಿ, ಹೊಸಕೇರಿ, ಬಾವಿಕೇರಿ, ಸೂರ್ವೆ ಹಿಚಕಡ, ಕಣಗಿಲ ಮುಂತಾದ ಗ್ರಾಮಗಳ ಸಾವಿರಾರು ಜನ ಸೇರಿದ್ದರು. ಪೊಲೀಸರ ತಡೆಯನ್ನೂ ಲೆಕ್ಕಿಸದೇ ಅಂಕೋಲಾದ ಪೂಜಗೇರಿ ಗ್ರಾಮಕ್ಕೆ ಉಪ್ಪಿನ ಸತ್ಯಾಗ್ರಹದ ಮೆರವಣಿಗೆ ಸಾಗಿತ್ತು. ಪಟ್ಟಣದಿಂದ 3 ಕಿಮೀ ದೂರದವರೆಗೆ ಸಾಗಿ ಮಣ್ಣಿನ ಮಡಿಕೆಯಲ್ಲಿ ಸಮುದ್ರದ ಉಪ್ಪು ನೀರನ್ನು ಸಂಗ್ರಹಿಸಲಾಯಿತು. ನಂತರ ತಾಲೂಕು ಕಚೇರಿಯ ಎದುರು ಸೇರಿ ಉಪ್ಪು ತಯಾರಿಸಿ ಅದನ್ನು ಹರಾಜು ಹಾಕಲಾಯಿತು. ರೇವು ಹೊನ್ನಪ್ಪ ನಾಯಕ ಎಂಬುವವರು ಅದನ್ನು ಖರೀದಿಸಿದರು ಎಂದು ಅಂಕೋಲಾ ಸ್ವಾತಂತ್ರ್ಯ ಹೋರಾಟದ ಕುರಿತು ಪುಸ್ತಕ ಬರೆದಿರುವ ಶಾಂತಾರಾಮ ನಾಯಕ ಹಿಚಕಡ ಬರೆದಿದ್ದಾರೆ. ಅಂದು ಸಾಕಷ್ಟು ಜನರನ್ನು ಬಂಧಿಸಲಾಯಿತು. ಆದರೆ, ದಂಡಿ ಮಾದರಿಯಲ್ಲಿ ನಡೆದ ಅಂಕೋಲಾದ ಉಪ್ಪಿನ ಸತ್ಯಾಗ್ರಹವು ಅಂದು ರಾಷ್ಟ್ರದ ಗಮನ ಸೆಳೆದಿತ್ತು.

ಕರ ನಿರಾಕರಣೆ ಚಳುವಳಿ

ಇದೇ ವೇಳೆಗೆ ಗಾಂಧೀಜಿ ಅವರು ಕರ ನಿರಾಕರಣೆ ಚಳುವಳಿ ಘೋಷಿಸಿದ್ದರು. ಅಂಕೋಲೆಯ ಜನ ಅದರಲ್ಲೂ ಸಕ್ರಿಯವಾಗಿ ಪಾಲ್ಗೊಂಡರು. ಅಂಕೋಲೆಯ ಹಲವು ಹಾಲಕ್ಕಿ ಒಕ್ಕಲು ಹಿಡುವಳಿದಾರರು ಜಮೀನ್ದಾರರಿಗೆ ತಮ್ಮ ಪಾಲನ್ನು ನೀಡಲು ನಿರಾಕರಿಸಿದರು. ಹಲವು ನಾಡವ ಜಮೀನ್ದಾರರು ಪಟೇಲರಿಗೆ ಕರ ನೀಡಲು ನಿರಾಕರಿಸಿದರು. ಇದರ ಮುಂದುವರಿದ ಭಾಗವಾಗಿ ವಾಸರೆ ಸುಬ್ರಾಯ ನಾಯ್ಕ ತಮ್ಮ ಪಟೇಲ್ ಹುದ್ದೆಗೆ ರಾಜೀನಾಮೆ ನೀಡಿದರು. ಅವರ ನಂತರ ಅಂಕೋಲಾ ತಾಲೂಕಿನ ಹಲವು ಪಟೇಲರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಕರ ನಿರಾಕರಣೆ ಚಳುವಳಿಯಿಂದಾಗಿ 500 ಎಕರೆ ಜಮೀನು, 54 ಸಾವಿರ ರೂಪಾಯಿಯಷ್ಟು ಬೆಲೆ ಬಾಳುವ ಮನೆಗಳು, 55 ಸಾವಿರ ರೂಪಾಯಿಯಷ್ಟು ಮೌಲ್ಯದ ಚಿನ್ನಾಭರಣ, ಇತರ ಗೃಹೋಪಯೋಗಿ ವಸ್ತುಗಳನ್ನು ಜಪ್ತು ಮಾಡಲಾಯಿತು.ಸುಬ್ರಾಯ ನಾಯ್ಕರು ಜೈಲು ವಾಸ ಅನುಭವಿಸಿದರು.

ಬಾಸಗೋಡಿನ ರಾಮಾ ನಾಯಕ ಎಂಬುವವರು ತಮ್ಮ ಗ್ರಾಮದಲ್ಲಿ ಸೇವಾದಳ ತರಬೇತಿ ಆರಂಭಿಸಿದ್ದರು. ನಾ.ಸು.ಹರ್ಡಿಕರ್, ಗಂಗಾಧರ ರಾವ್ ದೇಶಪಾಂಡೆ, ಮುದವೀಡು ಕೃಷ್ಣರಾವ್ ಮುಂತಾದವರನ್ನು ಕರೆಸಿ, ಊರಿನ ಜನರಿಗೆ ತರಬೇತಿ ಕೊಡಿಸಿದರು. ಅವರು ಅಂಕೋಲಾದಲ್ಲಿ ನಡೆದ ಕರಬಂಽ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಸೂರ್ವೆಯ ವೆಂಕಣ್ಣ ನಾಯಕ ಅವರ ಪಕ್ಕದ ಮನೆಯಲ್ಲಿ ಕರ ನಿರಾಕರಣೆಯ ಹಲವು ಸಭೆಗಳು ನಡೆದವು. ಇದೇ ಅಂಕೋಲಾದ ಸೂರ್ವೆ ಗ್ರಾಮ ಈ ಕರ ನಿರಾಕರಣೆಯ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿತು.