ಹೊನ್ನಾಳಿ: ಯಾರ‌್ರೀ.. ಗೊಲ್ಲರಹಳ್ಳಿ, ಯಾರ‌್ರೀ.. ಮಲ್ಲೆಬೆನ್ನೂರು, ಹರಿಹರ… ಬರ‌್ರಿ ಬರ‌್ರಿ… ಮುಂದೆ ಹೋಗಿ ಮುಂದೆ ಹೋಗಿ..
ಹೀಗೆ.. ಕಂಡಕ್ಟರ್ ಆಗಿ ಸಮವಸ್ತ್ರ ಧರಿಸಿ ಸೀಟಿ ಹೊಡೆದು ಮಹಿಳೆಯರಿಗೆ ಟಿಕೆಟ್ ನೀಡಿ ಉಚಿತ ಪ್ರಯಾಣಕ್ಕೆ ಭಾನುವಾರ ಚಾಲನೆ ನೀಡಿದವರು ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡರು.
ನಗರದ ಕೆಎಸ್‌ಆರ್‌ಟಿಸಿಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿ ಮಾತನಾಡಿ, ಚುನಾವಣೆಗೂ ಮುಂಚೆ ಮಹಿಳೆಯರಿಗಾಗಿ ಹಲವು ಯೋಜನೆಗಳ ಭರವಸೆ ಕಾಂಗ್ರೆಸ್ ನೀಡಿತ್ತು. ಅದರಂತೆ ಮೊದಲನೆಯದಾಗಿ ಶಕ್ತಿ ಯೋಜನೆ ಮುಖಾಂತರ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಇಂದು ಜಾರಿಗೆ ತಂದು ಅವರ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ನೀಡಿದ್ದ ಎಲ್ಲ ಭರವಸೆ ಈಡೇರಿಸಿದೆ. ಉಳಿದ ಗ್ಯಾರಂಟಿಗಳನ್ನು ಹಂತಹಂತವಾಗಿ ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.
ಗೃಹಲಕ್ಷ್ಮೀ ಯೋಜನೆಯಲ್ಲಿ ಮನೆ ಯಜಮಾನಿಗೆ ಈ ಯೋಜನೆ ಸಿಗಲಿದೆ. ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಅತ್ತೆಗೆ ಸಿಕ್ಕರೆ ಸೊಸೆಯಂದಿರು ಬೇಜಾರು ಮಾಡಿಕೊಳ್ಳಬೇಡಿ ಎಂದರು.
ಜುಲೈ ಒಂದರಿಂದ ಬರುವ ವಿದ್ಯುತ್ ಬಿಲ್ಲನ್ನು ಯಾರೂ ಕಟ್ಟಬೇಡಿ, ಬೆಸ್ಕಾಂ ಸಿಬ್ಬಂದಿ ಬಿಲ್ ಕೇಳಿದರೆ ಯಾರೂ ಸಹ ಕಟ್ಟಬೇಡಿ,ಅದಕ್ಕೆ ನಾನೇ ಹೊಣೆ. ನನ್ನ ಬಳಿ ಬನ್ನಿ ಎಂದು ಶಾಸಕರು ಹೇಳಿದರು.
ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಮಾತನಾಡಿದರು. ತಹಸೀಲ್ದಾರ್‌ಗಳಾದ ತಿರುಪತಿ ಪಟೇಲ್,ಆರ್.ವಿ. ಕಟ್ಟಿ. ಸಾರಿಗೆ ಇಲಾಖೆ ಕಾನೂನು ಘಟಕದ ದೇವೇಂದ್ರನ್, ಹೊನ್ನಾಳಿ ಸಾರಿಗೆ ಘಟಕದ ವ್ಯವಸ್ಥಾಪಕ ಮಹೇಶ್ವರಪ್ಪ, ಪುರಸಭೆ ಸದಸ್ಯರಾದ ಮೈಲಪ್ಪ, ರಾಜೇಂದ್ರ, ಸಾವಿತ್ರಮ್ಮ ವಿಜೇಂದ್ರಪ್ಪ, ಉಷಾ ಗಿರೀಶ್, ಮುಖ್ಯಾಧಿಕಾರಿ ನಿರಂಜನಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಮಾಜಿ ಶಾಸಕ ಡಾ.ಗಂಗಪ್ಪ ಇತರರು ಇದ್ದರು.