ಜಿಲ್ಲೆ

ಶೌಚ ಸ್ವಚ್ಛಗೊಳಿಸುವ ಕಾರ್ಯದಿಂದ ಶಿಕ್ಷಕರನ್ನು ಮುಕ್ತಗೊಳಿಸಿ: ಎಂ ಎಲ್ ಸಿ ಕೆ.ವಿವೇಕಾನಂದ

ಮೈಸೂರು: ಶಾಲಾ ಆವರಣ ಹಾಗೂ ಶೌಚ ಸ್ವಚ್ಛಗೊಳಿಸುವ ಕಾರ್ಯ ಶಿಕ್ಷಕ ಸಮುದಾಯಕ್ಕೆ ಒಂದು ದೊಡ್ಡ ಸಮಸ್ಯೆಯಾಗಿದ್ದು, ಈ ಕಾರ್ಯದಿಂದ ಮುಕ್ತಿಕೊಡಬೇಕು ಎಂದು ವಿಧಾನ ಪರಿಷತ್ತಿನ ಸದಸ್ಯ ಕೆ.ವಿವೇಕಾನಂದ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಸಭಾಪತಿಗಳ ಮೂಲಕ ಸರ್ಕಾರವನ್ನು ಕೋರಿ ಅವರು, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಿದ್ಯಾರ್ಥಿಗಳ ಸಹಕಾರದಿಂದ ಈ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಆದರೆ ನಮ್ಮಲ್ಲಿ ಮಕ್ಕಳಿಂದ ಈ ಕಾರ್ಯವನ್ನು ಮಾಡಿಸಬಾರದೆಂದು ಇಲಾಖೆ ಸೂಚಿಸಿದೆ ಎಂದರು.

ಕೆಲವು ಶಾಲೆಗಳಲ್ಲಿ ಪರಿಚಾರಕರ ಹುದ್ದೆಯೇ ಮಂಜೂರಾಗಿಲ್ಲ. ಅಲ್ಲದೆ ಕೆಲವು ಕಡೆ ಖಾಲಿ ಇದೆ. ಕೆಲವೊಮ್ಮೆ ಈ ಕಾರ್ಯವನ್ನು ಶಿಕ್ಷಕರೇ ನಿರ್ವಹಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇಂತಹ ಸಮಯದಲ್ಲಿ ಮಕ್ಕಳು ಸಹಕಾರ ನೀಡಿದರೆ ಮುಖ್ಯಶಿಕ್ಷಕರು, ಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಒಟ್ಟಾರೆಯಾಗಿ ಶಿಕ್ಷಕ ವೃತ್ತಿ ಕೇವಲ ಬೋಧನೆಗೆ ಸೀಮಿತವಾಗದೆ ಎಲ್ಲ ಕಾರ್ಯವನ್ನು ನಿರ್ವಹಿಸುವಂತಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡು ಸ್ವಚ್ಛತೆ ಕಾರ್ಯವನ್ನು ಯಾರಿಂದ ನಿರ್ವಹಿಸಬೇಕು, ಹೊರಗುತ್ತಿಗೆ ಆಧಾರದಲ್ಲಿ ನಿರ್ವಹಿಸಬೇಕೆ ಇಲ್ಲವೇ ಸ್ಥಳೀಯ ಸಂಸ್ಥೆಗಳಾದ ಮಹಾನಗರಪಾಲಿಕೆ, ನಗರಸಭೆ, ಪಟ್ಟಣಪಂಚಾಯಿತಿ, ಗ್ರಾಮ ಪಂಚಾಯಿತಿ ಸಹಕಾರದಿಂದ ನಿರ್ವಹಿಸಬಹುದಾಗಿದೆ. ಆದ್ದರಿಂದ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳ, ಶಿಕ್ಷಕರ -ಪದವೀಧರ ಕ್ಷೇತ್ರದ ಶಾಸಕರ ಜಂಟಿ ಸಭೆ ಕರೆದು ಅತಿ ಶೀಘ್ರವಾಗಿ ಈ ಸಮಸ್ಯೆ ಬಗೆಹರಿಸಿ ಶಿಕ್ಷಕರ ಮಾನಸಿಕ ಒತ್ತಡಕ್ಕೆ ತೆರೆ ಎಳೆಯಬೇಕು ಎಂದು ಕೋರಿದರು.

----------