ಹೊಸಪೇಟೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸೀಳು ತುಟಿ, ಸೀಳು ಅಂಗುಳ ಮತ್ತು ಮುಖದ ವಿರೂಪಗಳ ಉಚಿತ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಕಾರ್ಯಕ್ರಮವನ್ನು ಡಿಎಚ್‌ಒ ಶಂಕರ ನಾಯ್ಕ ಉದ್ಘಾಟಿಸಿದರು. ಆರ್‌ಸಿಎಚ್ ಅಧಿಕಾರಿ ಜಂಬಯ್ಯನಾಯಕ ಇತರರಿದ್ದರು. 
ಜಿಲ್ಲೆ

ಸೀಳುತುಟಿಗೆ ಉಚಿತ ಶಸ್ತ್ರಚಿಕಿತ್ಸೆ

ಗಾಯತ್ರಿ ಮಾಲಿಪಾಟೀಲ್

ಹೊಸಪೇಟೆ: ಸರ್ಕಾರಿ ಆಸ್ಪತ್ರೆಗಳಲ್ಲಿ ಸೀಳು ತುಟಿ, ಅಂಗುಳ ಮತ್ತು ಮುಖದ ವಿರೂಪದ ಶಸ್ತ್ರಚಿಕಿತ್ಸೆ ಉಚಿತವಾಗಿ ನೀಡಲಾಗುತ್ತಿದೆ ಎಂದು ಡಿಎಚ್‌ಒ ಡಾ.ಶಂಕರ ನಾಯ್ಕ ಹೇಳಿದರು.

ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಶುಕ್ರವಾರ ಹಮ್ಮಿಕೊಂಡಿದ್ದ ಸೀಳು ತುಟಿ, ಅಂಗುಳ ಮತ್ತು ಮುಖದ ವಿರೂಪಗಳ ಕುರಿತು ಉಚಿತ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಸೇವೆಗಳ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭ್ರೂಣ ಬೆಳವಣಿಗೆ ಸಮಯದಲ್ಲಿ ಮೇಲಿನ ತುಟಿ ಮತ್ತು ಬಾಯಿ ಮೇಲ್ಭಾಗದ ಅಂಗ ಸರಿಯಾಗಿ ಸೇರದಿದ್ದಾಗ ತುಟಿ ಹಾಗೂ ಅಂಗುಳಗಳು ಸೀಳುತ್ತವೆ. ಶಸ್ತ್ರ ಚಿಕಿತ್ಸೆಯಿಂದ ಅದನ್ನು ಸರಿಪಡಿಸಬಹುದು ಎಂದರು.

ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ಜಿಲ್ಲೆಯಲ್ಲಿ 10 ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಮುಖದ ವಿರೂಪಗಳ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಕಳೆದ ವರ್ಷ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ 43 ಮುಖದ ವಿರೂಪಗಳು ಮತ್ತು 25 ಸೀಳು ತುಟಿ, ಸೀಳು ಅಂಗುಳಕ್ಕೆ ಉಚಿತ ಶಸ್ತ್ರ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.