ಜಿಲ್ಲೆ

ಅಸ್ತಮಾ ರೋಗಿಗಳಿಗೆ ಉಚಿತ ಔಷಧ ವಿತರಣೆ ಜೂ. 8ರಂದು

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಕಳೆದ 58 ವರ್ಷಗಳಿಂದ ಅಸ್ತಮಾ ರೋಗಿಗಳಿಗೆ ಉಚಿತವಾಗಿ ಮಂತ್ರ್‌ಷಧ ವಿತರಿಸುವ ಮೂಲಕ ಲಕ್ಷ್ಮೇಶ್ವರದ ಕೀರ್ತಿಯನ್ನು ದೇಶದುದ್ದಗಲಕ್ಕೂ ಹಬ್ಬುವಂತೆ ಮಾಡಿದ್ದ ದಿ. ಡಾ. ವೈದ್ಯ ಬಾಬುರಾವ್ ಕುಲಕರ್ಣಿ ಅವರ ಸೇವೆ ಅಪಾರವಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಈ ಉಚಿತ ಔಷಧ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಪುರಸಭೆ ಮಾಜಿ ಅಧಕ್ಷ ವಿ.ಜಿ. ಪಡಗೇರಿ ಹೇಳಿದರು.

ಪಟ್ಟಣದ ದಿ. ವೈದ್ಯ ಬಾಬುರಾವ್ ಕುಲಕರ್ಣಿಯವರ ನಿವಾಸದಲ್ಲಿ ಭಾನುವಾರ ಆಯೋಜಿಸಿದ್ದ 59ನೇ ವರ್ಷದ ಉಚಿತ ಅಸ್ತಮಾ ಔಷಧ ವಿತರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಈ ಬಾರಿ ಜೂನ್ 8ರಂದು ಮಧ್ಯಾಹ್ನ 1 ಗಂಟೆ 23 ನಿಮಿಷಕ್ಕೆ ಮೃಗಶಿರ ಮಳೆ ಪ್ರವೇಶ ಕಾಲದಲ್ಲಿ ಡಾ. ಹರೀಶ ಕುಲಕರ್ಣಿ ಅವರ ನೇತೃತ್ವದಲ್ಲಿ ಲಕ್ಷ್ಮೇಶ್ವರದ ಸರ್ಕಾರಿ ಪ್ರಾಥಮಿಕ ಶಾಲೆಯ ನಂ. 1ರ ಆವರಣದಲ್ಲಿ 59ನೇ ವರ್ಷದ ಉಚಿತ ಅಸ್ತಮಾ ಯಜ್ಞ ನಡೆಯಲಿದೆ. ಆಗಮಿಸುವ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿ. ಇದನ್ನು ಸೇವೆಯ ರೂಪದಲ್ಲಿ ಯಶಸ್ವಿಗೊಳಿಸಬೇಕಾಗಿದೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಎಂ.ಆರ್. ಪಾಟೀಲ, ಗೋಪಾಲ ಪಡ್ನೀಸ್, ನಿಂಗಪ್ಪ ಬನ್ನಿ ಮಾತನಾಡಿ, ಅಂದು ಪುರಸಭೆಯಿಂದ ಅವಶ್ಯ ವ್ಯವಸ್ಥೆ ಮಾಡಿಸಲಾಗುವುದು. ಜನರಿಗೆ ಕುಡಿಯುವ ನೀರು, ಔಷಧ, ಸ್ವಚ್ಛತೆ, ಸಾರಿಗೆ, ಪ್ರಸಾದ, ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದರು.

ಪಲ್ಲಣ್ಣನವರು ಕುಲಕರ್ಣಿ ಅಧ್ಯಕ್ಷತೆವಹಿಸಿದ್ದರು. ಡಾ.ಹರೀಶ ಕುಲಕರ್ಣಿ, ಪುಟ್ಟಪ್ಪ ಕೋರಿ, ಗಂಗಪ್ಪ ದುರಗಣ್ಣವರ, ಕರಿಯಪ್ಪ ಉಳ್ಳಟ್ಟಿ, ನಾಗರಾಜ ಕೋರಿ, ನಿಂಗಪ್ಪ ಕಲ್ಯಾಣಿ, ಬಸವರಾಜ ಗುಡಗುಂಟಿ, ಕೃಷ್ಣ ಕ್ಷತ್ರಿ, ನೀಲಪ್ಪ ಬಲೇಶಿ, ಪಾಪಣ್ಣ ಬನ್ನಿ ಸೇರಿದಂತೆ ಅನೇಕರು ಹಾಜರಿದ್ದು, ಕಾರ್ಯಕ್ರಮ ಯಶಸ್ವಿಗೆ ಸಲಹೆ ಸೂಚನೆ ನೀಡಿದರು.