ಮೂಡುಬಿದಿರೆ: ನೇತಾಜಿ ಬ್ರಿಗೇಡ್ ಸಂಘಟನೆ 5ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ, ಜೀವಸಾರ್ಥಕತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು ಇವುಗಳ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ, ಚಿತ್ರಕಲಾ ಸ್ಪರ್ಧೆ, ಅಂಗಾಂಗ ದಾನ ಮಾಹಿತಿ, ಸಹಾಯಧನ ವಿತರಣೆ, ಸನ್ಮಾನ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಆ.18ರಂದು ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ನೇತಾಜಿ ಬ್ರಿಗೇಡ್ ನ ಸ್ಥಾಪಕಾಧ್ಯಕ್ಷ ರಾಹುಲ್ ಕುಲಾಲ್ ತಿಳಿಸಿದ್ದಾರೆ.
ಶಾಸಕ ಉಮಾನಾಥ ಎ.ಕೋಟ್ಯಾನ್ ಉದ್ಘಾಟಿಸಲಿದ್ದು, ಶ್ರೀ ಕ್ಷೇತ್ರ ಕರಿಂಜೆಯ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ನೇತಾಜಿ ಬ್ರಿಗೇಡ್ ಅಧ್ಯಕ್ಷ ದಿನೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಅಭಯಚಂದ್ರ ಸಹಿತ ಗಣ್ಯರು ಭಾಗವಹಿಸಲಿದ್ದಾರೆ.
ಬೆಳಗ್ಗೆ 11ರಿಂದ ವಿವಿಧ ವಿಭಾಗದ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಸಮಾಜದ ಅಶಕ್ತ, ಅನಾರೋಗ್ಯಕ್ಕೀಡಾದ ಕುಟುಂಬಗಳಿಗೆ ಸಹಾಯಧನ ವಿತರಣೆ, ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಸನ್ಮಾನ, ಸಮಾಜಮುಖಿ ಸೇವೆಗೈಯ್ಯುತ್ತಿರುವ ಸಂಘ ಸಂಸ್ಥೆಗಳಿಗೆ ಗೌರವಾರ್ಪಣೆ ನಡೆಯಲಿದೆ. ಸಂಸದ ಬ್ರಿಜೇಶ್ ಚೌಟ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಎಕ್ಸಲೆಂಟ್ ಸಮೂಹ ಸಂಸ್ಥೆ ಅಧ್ಯಕ್ಷ ಯುವರಾಜ್ ಜೈನ್ ಮತ್ತಿತರರು ಉಪಸ್ಥಿತರಿರುವರು.
ಸಾಯಂಕಾಲ 4 ರಿಂದ ದಿನೇಶ್ ಕೋಡಪದವು ಮತ್ತು ತಂಡದಿಂದ ಯಕ್ಷ ಹಾಸ್ಯ ವೈಭವ ನಡೆಯಲಿದೆ. ನೇತಾಜಿ ಬ್ರಿಗೇಡ್ ಕಳೆದ ನಾಲ್ಕು ವರ್ಷಗಳಿಂದ ಹಲವು ಸಮಾಜಮುಖಿ ಕಾರ್ಯಕ್ರಮ ಕೈಗೊಂಡಿದ್ದು 142 ವಾರಗಳ ಸ್ವಚ್ಛತಾ ಅಭಿಯಾನ, ಜಾತ್ರಾ ಮಹೋತ್ಸವ, ಕಂಬಳಗಳಲ್ಲಿ ವಿಶೇಷ ವೇಷ ಧರಿಸಿ ರೂ. 20ಲಕ್ಷಕ್ಕಿಂತಲೂ ಅಧಿಕ ಧನ ಸಂಗ್ರಹಿಸಿ ಅನಾರೋಗ್ಯ ಪೀಡಿತರಿಗೆ ನೆರವು, ಗೋಡೆ ಬರಹಗಳ ಮೂಲಕ ಜಾಗೃತಿ ಸಹಿತ ವಿವಿಧ ಸಮಾಜಮುಖಿ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದೇವೆ ಎಂದರು.
ಅಧ್ಯಕ್ಷ ದಿನೇಶ್ ಶೆಟ್ಟಿ, ಸಹ ಸಂಚಾಲಕ ಕುಮಾರ್ ಮಾಸ್ತಿಕಟ್ಟೆ, ಕೋಶಾಧಿಕಾರಿ ನಿತಿನ್ ಭಟ್, ಸ್ವಚ್ಛತಾ ಪ್ರಮುಖ್ ಶರಣ್ ಶೆಟ್ಟಿ ಗೋಷ್ಠಿಯಲ್ಲಿದ್ದರು.