ಮಲೆಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಸರಸ್ವತಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಚಂದ್ರಶೇಖರ್, ನಾಗೇಶ್, ಸರಗೂರು ಮಹದೇವಸ್ವಾಮಿ, ಕಿರಣ್, ಮಲ್ಲಿಕಾರ್ಜುನ, ನಾಗರಾಜು ಇತರರು ಇದ್ದರು.  
ಜಿಲ್ಲೆ

27ರಂದು ಉಚಿತ ಸಾಮೂಹಿಕ ವಿವಾಹ

ಅಭಿನಯ್ ಎಚ್.ಎಂ

ಹನೂರು: ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಸೆ.27ರಂದು ನಡೆಯಲಿರುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದು, ಯಾವುದೇ ಲೋಪವಾಗದಂತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಮನವಿ ಮಾಡಿದರು.

ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆ ಸಂಬಂಧ ಅಗತ್ಯ ಸಿದ್ಧತೆ ಕುರಿತು ಮ.ಬೆಟ್ಟದ ನಾಗಮಲೆ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸಾಮೂಹಿಕ ವಿವಾಹಕ್ಕೆ ಈಗಾಗಲೇ 50 ವಧು-ವರರಿಂದ ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರ ಸಂಖ್ಯೆ 60ಕ್ಕೇರಬಹುದು. ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಗಳು ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಹಾಗಾಗಿ, ಅಚ್ಚುಕಟ್ಟಾಗಿ ನಡೆಯಬೇಕಿದೆ ಎಂದು ಹೇಳಿದರು.

ವಧು-ವರರಿಗೆ ಮಾಂಗಲ್ಯ, ಸಮವಸ್ತ್ರ ವಿತರಣೆ, ಆಗಮಿಸುವ ಕುಟುಂಬಸ್ಥರಿಗೆ ಕೊಠಡಿ, ಊಟದ ವ್ಯವಸ್ಥೆ, ವೇದಿಕೆ ನಿರ್ಮಾಣ, ಆಸನ ವ್ಯವಸ್ಥೆ, ಧಾರ್ಮಿಕ ಕೈಂಕರ್ಯ ಸೇರಿದಂತೆ ಇತರ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರಿಗೂ ನೀಡಿರುವ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷೃ ಸಲ್ಲದು. ಅಲ್ಲದೆ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವಂತೆ ಸಲಹೆ ನೀಡಿದರು.

26 ರಂದು ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.26 ರಂದು ಸಂಜೆ 4 ಗಂಟೆಗೆ ಮ.ಬೆಟ್ಟಕ್ಕೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಇದ್ದು, ಸಂಜೆ 7ಕ್ಕೆ ಪ್ರಾಧಿಕಾರದ ಅಭಿವೃದ್ಧಿ ಸಂಬಂಧ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ಹಾಗಾಗಿ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ನಿಖರವಾದ ಅಗತ್ಯ ಮಾಹಿತಿಯನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ: ಮ.ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ಈಗಾಗಲೇ ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಮ.ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಅಗತ್ಯ ಕ್ರಮವಹಿಸಲಾಗುವುದು ಎಂದು ಸರಸ್ವತಿ ವಿಜಯವಾಣಿಗೆ ತಿಳಿಸಿದರು.

ಸಭೆಯಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕಾಧೀಕ್ಷಕ ನಾಗೇಶ್, ಎಸ್‌ಡಿಎ ಸರಗೂರು ಮಹದೇವಸ್ವಾಮಿ, ಪಿಡಿಒ ಕಿರಣ್, ನೌಕರರಾದ ನಾಗರಾಜು, ಮಲ್ಲಿಕಾರ್ಜುನ, ಜನಾರ್ಧನ್, ಮಹೇಶ್ ಇತರರು ಇದ್ದರು.