Free Kidney Checkup Camp 
ಜಿಲ್ಲೆ

ಉಚಿತ ಶಿಬಿರದಿಂದ ಬಡ ಜನರಿಗೆ ನೆರವು

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡವರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು, ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಿಪ್ಪಾನ್ ಎಕ್ಸ್‌ಪ್ರೆಸ್ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ವಾಣಿಶ್ರೀ ಹೇಳಿದರು.
ಹೋಬಳಿಯ ಸೋಮತ್ತನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಜಪಾನ್ ರಾಷ್ಟ್ರದ ಬಹುರಾಷ್ಟ್ರೀಯ ಕಂಪನಿಯಾದ ನಿಪ್ಪಾನ್ ಎಕ್ಸ್‌ಪ್ರೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಅರ್ಪಣಾ ಸೇವಾ ಸಂಸ್ಥೆ ಮತ್ತು ಬೆಂಗಳೂರು ಕಿಡ್ನಿ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಮೂತ್ರಪಿಂಡ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತ ಖಾಯಿಲೆಗಳಾಗಿದ್ದು, ಬಡಜನರು ಆರ್ಥಿಕವಾಗಿ ಭರಿಸಲು ಅಸಾಧ್ಯ. ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ ಎಂದರು.
ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಪಿ.ಕೃಷ್ಣಮೂರ್ತಿ ಮಾತನಾಡಿ, ನಮ್ಮ ಜೀವನಶೈಲಿ ಬದಲಿಸಿಕೊಳ್ಳುವ ಮೂಲಕ ಒತ್ತಡದಿಂದ ಮುಕ್ತರಾಗಲು ದೈಹಿಕ ವ್ಯಾಯಾಮ, ಯೋಗಾಭ್ಯಾಸ, ಧ್ಯಾನ ಮಾಡಬೇಕು. ದೈಹಿಕ ಚಟುವಟಿಕೆಯಿಂದ ಹೃದಯ ಸಂಬಂಧಿ ಕಾಯಿಲೆ ಕಡಿಮೆ ಮಾಡಬಹುದು. ರೋಗ ಬರುವ ಮುನ್ನ ಮುಂಜಾಗ್ರತೆ ವಹಿಸಬೇಕು. ತಂಬಾಕು ಪದಾರ್ಥಗಳು ಮತ್ತು ಮಧ್ಯಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ. ಎದೆ ಉರಿಯಾದಾಗ ಎಸಿಡಿಟಿ ಎಂದುಕೊಂಡು ವೈದ್ಯರ ಬಳಿ ತೋರಿಸದೆ, ಔಷಧಿ ತೆಗೆದುಕೊಳ್ಳುವುದು ಸರಿಯಲ್ಲ. ಆಹಾರದಲ್ಲಿ ಉಪ್ಪು ಕಡಿಮೆ ಬಳಸಿ, ತರಕಾರಿ, ಹಣ್ಣು ಹೆಚ್ಚು ಉಪಯೋಗಿಸಬೇಕು ಎಂದರು.

ಬೆಂಗಳೂರು ಕಿಡ್ನಿ ಫೌಂಡೇಶನ್ ಡಾ.ಸುಂದರೇಶ್ ಮಾತನಾಡಿ, ಕಾಯಿಲೆ ಎಂಬುದು ಮನುಷ್ಯನಲ್ಲಿ ಪರಿಣಾಮಕಾರಿಯಾಗಿ ಬೆಳೆದು, ಮಾನಸಿಕವಾಗಿ ಕುಬ್ಜನನ್ನಾಗಿ ಮಾಡಿ ಕೊನೆಗೆ ಸಾವಿನ ಸುಳಿಯಲ್ಲಿ ಸಿಲುಕಿಸುತ್ತದೆ. ಅದ್ದರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ, ಒತ್ತಡದ ಕೆಲಸದ ನಡುವೆಯೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು 40 ವರ್ಷ ಮೀರಿದ ಪ್ರತಿಯೊಬ್ಬ ವ್ಯಕ್ತಿಯೂ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಸಂಸ್ಥೆ ಸಹಾಯಕ ಸಿಬ್ಬಂದಿ ಬಿಜ್ಜು, ಎಂ.ಉಮೇಶ್ ಹೋಲ, ರಾಘವೇಂದ್ರ, ವರುಣ್, ವಾಣಿಶ್ರೀ ಇದ್ದರು.