ಚನ್ನಗಿರಿ: ಇಂದಿನ ದಿನಮಾನಗಳಲ್ಲಿ ಜನರು ಹಣ, ಸಂಪತ್ತಿನ ಹಿಂದೆ ಬಿದ್ದು ಆರೋಗ್ಯ ಸಂಪತ್ತನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಗರಗ ಗ್ರಾಮ ಪಂಚಾಯಿತಿ ಸದಸ್ಯ ಮಹೇಂದ್ರಪ್ಪ ತಿಳಿಸಿದರು.
ತಾಲೂಕಿನ ಹೊನ್ನಾನಾಯಕನ ಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಆಸ್ಪತ್ರೆ ಹಾಗೂ ಗರಗ ಆರೋಗ್ಯ, ಕ್ಷೇಮ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಮೇಳ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ಒತ್ತಡದ ಬದುಕಿನಲ್ಲಿ ಆರೋಗ್ಯ ಹಾಳುಮಾಡಿಕೊಳ್ಳುತ್ತಿದ್ದೇವೆ. ಶ್ರೀಮಂತಿಕೆ ನಮಗೆ ಆರೋಗ್ಯ ನೀಡುವುದಿಲ್ಲ. ಅದರ ಬದಲು ನೆಮ್ಮದಿಯ ಬದುಕು ನಡೆಸಲು ಪ್ರತಿನಿತ್ಯ ವ್ಯಾಯಾಮ, ಉತ್ತಮ ಆಹಾರ ಸೇವನೆ ಮಾಡಬೇಕು ಎಂದರು.
ಹೋಟೆಲ್ ತಿನಿಸುಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಸಾಧ್ಯವಾದಷ್ಟು ಮನೆ ಆಹಾರ ಸೇವಿಸಬೇಕು. ಶುದ್ಧ್ದ ಕುಡಿಯುವ ನೀರಿನ ಸೇವನೆ ಮಾಡಬೇಕೆಂದರು.
ಕೇಂದ್ರದ ಡಾ.ವಸಂತಕುಮಾರ್ ಮಾತನಾಡಿ, ಆರೋಗ್ಯ ಉತ್ತಮವಾಗಿ ಇದ್ದರೆ ಜೀವನ ಶೈಲಿಯು ಉತ್ತಮವಾಗಿರುತ್ತದೆ ಎಂದರು.
ಸಮುದಾಯ ಆರೋಗ್ಯಾಧಿಕಾರಿ ಜಿ.ಕೆ. ಶಿವಕುಮಾರ್, ಆರೋಗ್ಯ ನಿರೀಕ್ಷಣಾಧಿಕಾರಿ ಆಶಾ, ಕಾರ್ಯಕರ್ತೆಯರಾದ ಎಚ್. ಹೊನ್ನಮ್ಮ, ಕವಿತಾ, ಕೆ.ಎಸ್. ಪುಷ್ಪಾ ಇನ್ನಿತರರು ಇದ್ದರು.