ಜಿಲ್ಲೆ

ರಕ್ತದಾನದಿಂದ ಮನುಷ್ಯದ ಆರೋಗ್ಯ ವೃದ್ಧಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ರಕ್ತಕ್ಕೆ ರಕ್ತವೇ ದಿವ್ಯೌಷಧ. ಒಂದು ಯೂನಿಟ್ ರಕ್ತದಿಂದ ನಾಲ್ವರ ಜೀವ ಉಳಿಸಬಹುದು. ಮಾತ್ರವಲ್ಲದೆ ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ದಿಸುವುದರ ಜತೆಗೆ ಜೀವ ಉಳಿಸಿದ ಆತ್ಮತೃಪ್ತಿ ಸಿಗಲಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.

ನಗರದ ಹೊಳಲು ವೃತ್ತದದಲ್ಲಿರುವ ಸಿಹಿನೀರು ಕೊಳದ ಆವರಣದಲ್ಲಿ ಪಿಎಂಬಿಐ ಜನೌಷಧ ಮಳಿಗೆ ಮಾಲೀಕರು, ಮಿಮ್ಸ್ ರಕ್ತನಿಧಿ ಕೇಂದ್ರ, ಅನನ್ಯ ಹಾರ್ಟ್ ಸಂಸ್ಥೆ, ರೋಟರಿ ಮಂಡ್ಯ, ಎಇಟಿ ಇನ್ಸಿಟ್ಯೂಟ್ ಆಫ್ ನರ್ಸಿಂಗ್, ಅಭಿನವ ಭಾರತಿ ಕಾಲೇಜ್ ಆಫ್ ಫಾರ್ಮಸಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಸಹಯೋಗದಲ್ಲಿ ಜನೌಷಧ ದಿನದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ಆರೋಗ್ಯ ಉಚಿತ ತಪಾಸಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಶೇ.30ರಷ್ಟು ರಕ್ತದ ಕೊರತೆ ಎದುರಿಸಲಾಗುತ್ತಿದೆ. ಶೇ.70ರಷ್ಟು ರಕ್ತ ಸಂಗ್ರಹವಾದರೂ ಬೇಡಿಕೆ ಹೆಚ್ಚಾಗುತ್ತದೆ. ರಕ್ತಕ್ಕೆ ಪರ್ಯಾಯವಾದ ರಕ್ತವಿಲ್ಲ. ಮನುಷ್ಯನಿಗೆ ಮನುಷ್ಯನ ರಕ್ತವನ್ನೇ ನೀಡಿ ಜೀವ ಉಳಿಸಬೇಕಿದೆ. ಈ ನಿಟ್ಟಿನಲ್ಲಿ ಇಂತಹ ಶಿಬಿರ ಹೆಚ್ಚು ನಡೆಯಬೇಕು ಎಂದರು.

ಬಜರಂಗ ಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಮಾತನಾಡಿ, ಜನೌಷಧ ಕೇಂದ್ರ ಬಡವರ ಪಾಲಿನ ಆಶಾಕಿರಣವಾಗಿದ್ದು, ಜೀವ ಉಳಿಸುವ ಸಂಜೀವಿನಿಯಾಗಿದೆ. ದೇಶದ ಪ್ರತಿ ತಾಲೂಕು, ಹೋಬಳಿ ಕೇಂದ್ರದಲ್ಲಿ ಜನೌಷಧ ಕೇಂದ್ರವಿದೆ. ಭಾರತದಲ್ಲಿ ಜನೌಷಧ ಮಾರಾಟದಲ್ಲಿ ಕಳೆದ ವರ್ಷ 20 ಸಾವಿರ ಕೋಟಿ ರೂ ವ್ಯವಹಾರ ಮಾಡಿದೆ. ಇದು ವರ್ಷದಿಂದ ವರ್ಷಕ್ಕೆ ಪ್ರತಿವರ್ಷ ಹೆಚ್ಚಳವಾಗುತ್ತಿದೆ. ಈ ನಡುವೆ ಕೆಲವರು ಕೇಂದ್ರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ತಡೆಯಲು ಕರಪತ್ರದ ಮೂಲಕ ಜಾಗೃತಿ ಹೆಚ್ಚಿಸಬೇಕಿದೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಅನನ್ಯ ಹಾರ್ಟ್ ಸಂಸ್ಥೆ ಅಧ್ಯಕ್ಷೆ ಬಿ.ಎಸ್.ಅನುಪಮಾ, ಬಿಜೆಪಿ ಮುಖಂಡ ಅರವಿಂದ್, ಮಿಮ್ಸ್ ರಕ್ತನಿಧಿ ಕೇಂದ್ರ ಹಿರಿಯ ಸಿಬ್ಬಂದಿ ರಫಿಕ್, ಪಿಎಂಬಿಐ ಜನೌಷಧ ಮಾರಾಟ ಮಾಲೀಕರಾದ ಅಕ್ಷಯ್‌ಕುಮಾರ್, ಅಭಿಷೇಕ್, ಕಿರಣ್, ಪರಂಜ್ಯೋತಿ ಪಟೇಲ್, ಪುನೀತ್, ಸುಹಾಸ್, ನಂಜೇಶ್, ಕುಶಾಲ್, ಸುಧೀರ್ ಇತರರಿದ್ದರು.

ಇದೇ ಸಂದರ್ಭದಲ್ಲಿ ಆರೋಗ್ಯ ಉಚಿತ ತಪಾಸಣೆ ನಡೆಸಿ ಔಷಧ ವಿತರಿಸಲಾಯಿತು. ಅಂತೆಯೇ 51 ಯೂನಿಟ್ ರಕ್ತಸಂಗ್ರಹವಾಯಿತು.