ಮೈಸೂರು: ಚಾಮರಾಜಪುರಂನ ಶ್ರೀರಾಮಮಂದಿರ ಎದುರು ನೂತನವಾಗಿ ಸ್ಥಳಾಂತರಗೊಂಡಿರುವ ನ್ಯೂ ಡಯಾಕೇರ್ ಸೆಂಟರ್ ಮತ್ತು ಪಾಲಿಕ್ಲಿನಿಕ್‌ನ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ಸಾರ್ವಜನಿಕರಿಗೆ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.
ನವಾಯು ಕೇರ್ ಸೆಂಟರ್, ಅಗರವಾಲ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಮಧುಮೇಹ, ರಕ್ತದೊತ್ತಡ, ಥೈರಾಯ್ಡ್, ನ್ಯೂರೋಪಥಿ, ವಿಟಮಿನ್, ರೆಟಿನೋಪಥಿ, ಕಣ್ಣಿನ ತಪಾಸಣೆ ಶಿಬಿರ ಸಹ ನಡೆಯಿತು.
ನ್ಯೂ ಡಯಾಕೇರ್ ಸೆಂಟರ್ ಮತ್ತು ಪಾಲಿಕ್ಲಿನಿಕ್‌ನ ಮುಖ್ಯಸ್ಥ ಡಾ.ಎ.ಆರ್.ರೇಣುಕಾಪ್ರಸಾದ್ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಸಂಪೂರ್ಣ ಮಧುಮೇಹಿಗಳ ಆರೈಕೆ, ಮಧುಮೇಹಿಗಳ ಕಣ್ಣಿನ ಘಟಕ, ಹೃದ್ರೋಗ, ಆಹಾರ ಪದ್ಧತಿ ಸೇರಿದಂತೆ ಇನ್ನಿತರೆ ಮಾಹಿತಿ ನೀಡಲಾಗುವುದು. ಅಲೋಪಥಿ ಹಾಗೂ ಆಯುರ್ವೇದ ಎರಡು ಚಿಕಿತ್ಸೆಗಳು ಒಂದೇ ಸೂರಿನಡಿ ಲಭ್ಯವಿದೆ ಎಂದರು.
ದೇಶದಲ್ಲಿ ಈಗ ಸುಮಾರು 8 ಕೋಟಿ ಜನ ಮಧುಮೇಹದಿಂದ ಬಳಲುತ್ತಿದ್ದು, ಅಂದಾಜು 13ರಿಂದ 14 ಕೋಟಿ ಜನರು ಮಧುಮೇಹ ತಗಲುವ ಅಂಚಿನಲ್ಲಿ ಇದ್ದಾರೆ. ಇವರನ್ನು ಗುರುತಿಸಿ ಅವರಿಗೆ ಮಧುಮೇಹ ಬಾರದಂತೆ ತಡೆಯುವುದು ಮುಖ್ಯ ಕರ್ತವ್ಯವಾಗಿದೆ. ಆದ್ದರಿಂದ 30 ವರ್ಷ ಮೇಲ್ಪಟ್ಟವರು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳ್ಳುವುದರಿಂದ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬಹುದು ಎಂದು ಹೇಳಿದರು.
ಪ್ರಾಥಮಿಕ ಹಂತದಲ್ಲಿಯೇ ಮಧುಮೇಹವನ್ನು ಪತ್ತೆ ಮಾಡಿದರೆ ಸೂಕ್ತ ಚಿಕಿತ್ಸೆ ಮೂಲಕ ಬರುವುದನ್ನು ತಡೆಗಟ್ಟಬಹುದು. ಅಂತಹ ಅತ್ಯಾಧುನಿಕ ಸಂಶೋಧನೆಗಳು ನಡೆದಿದ್ದು, ಆ ಸೌಲಭ್ಯ ನಮ್ಮ ಡಯಾಕೇರ್ ಸೆಂಟರ್ ಮತ್ತು ಪಾಲಿಕ್ಲಿನಿಕ್‌ನಲ್ಲಿ ಲಭ್ಯವಿದೆ ಎಂದು ತಿಳಿಸಿದರು.
ಮಧುಮೇಹಿಗಳ ನಿಗಾ ವಹಿಸಲು ಪ್ರತ್ಯೇಕವಾಗಿ ವಾಟ್ಸ್‌ಆ್ಯಪ್ ಮೂಲಕ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಅವರಿಗೆ ಯಾವ ರೀತಿ ಆಹಾರ ಪದ್ಧತಿ ಬೇಕು, ಔಷಧ ಇನ್ನಿತರ ಮಾಹಿತಿಯನ್ನು ತಿಳಿಸಲಾಗುವುದು. ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಿಕೊಂಡವರನ್ನು ಗುರುತಿಸಿ ಪ್ರತಿ ವರ್ಷ ಮಧುಮೇಹಿ ರಾಯಭಾರಿ ಪ್ರಶಸ್ತಿಯನ್ನು ಸಹ ನೀಡುತ್ತಾ ಬರಲಾಗುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ಎಲ್ಲ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲು ಶಾಲಾ, ಕಾಲೇಜುಗಳಲ್ಲಿ ಕಾರ್ಯಕ್ರಮ ರೂಪಿಸಲಾಗುವುದು. ಅಲ್ಲದೆ ರೋಗಿಗಳ ಅನುಕೂಲಕ್ಕಾಗಿ ಮನೆಯಲ್ಲಿಯೇ ರಕ್ತ ಪರೀಕ್ಷೆ, ಔಷಧ ತಲುಪಿಸುವುದು, ವಿಡಿಯೋ ಕಾಲ್ ಮೂಲಕವೂ ಕೌನ್ಸೆಲಿಂಗ್ ಕೂಡ ನಡೆಸಲಾಗವುದು ಎಂದು ವಿವರಿಸಿದರು.
ಪ್ರತಿ ಮೂರನೇ ಭಾನುವಾರ ಶಿಬಿರ:
ನವಾಯು ಕೇರ್ ಸೆಂಟರ್‌ನ ಮುಖ್ಯಸ್ಥರಾದ ಡಾ.ನವ್ಯಾಪ್ರಸಾದ್ ಮಾತನಾಡಿ, ಜನರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ನಮ್ಮ ಸಂಸ್ಥೆ ಪರವಾಗಿ ಪ್ರತಿ ತಿಂಗಳ ಮೂರನೇ ಭಾನುವಾರ ಅರ್ಧ ದಿನ ಉಚಿತವಾಗಿ ಶಿಬಿರ ಆಯೋಜಿಸಲಾಗುತ್ತದೆ ಎಂದು ಹೇಳಿದರು.
ಇಂದಿನ ಜೀವನ ಶೈಲಿ, ಆಹಾರ ಪದ್ಧತಿಯಿಂದ ಮಧುಮೇಹ ಹೆಚ್ಚಾಗುತ್ತಿದೆ. ಕೆಲವರಿಗೆ ಮಧುಮೇಹ ಬಂದಿರುವುದೇ ತಿಳಿಯದು. ಹಾಗಾಗಿ ತಪಾಸಣೆ ಮಾಡಿಸಿಕೊಂಡರೆ ಸಹಜ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದರು.
ಮಧುಮೇಹಕ್ಕೆ ಆಯುರ್ವೇದ ಹಾಗೂ ಅಲೋಪಥಿ ಎರಡರಲ್ಲೂ ಚಿಕಿತ್ಸೆ ಇರುವುದರಿಂದ ಸಮಸ್ಯೆ ಇರುವವರು ಯಾವ ಪದ್ಧತಿ ಬೇಕಾದರೂ ಅನುಸರಿಸಬಹುದು. ಅನಗತ್ಯ ಔಷಧ ತೆಗೆದುಕೊಳ್ಳುವುದಕ್ಕಿಂತ, ಯಾವ ಪ್ರಮಾಣದಲ್ಲಿ ಎಷ್ಟು ಔಷಧ ತೆಗೆದುಕೊಳ್ಳಬೇಕು ಎನ್ನುವುದು ಮುಖ್ಯ. ಅಂತಹ ಮಾಹಿತಿ ನಮ್ಮ ಸಂಸ್ಥೆಯಲ್ಲಿ ದೊರೆಯುತ್ತಿದ್ದು, ಜನರ ವಿಶ್ವಾಸಗಳಿಸಿದೆ ಎಂದು ಹೇಳಿದರು.