ಜಿಲ್ಲೆ

ಉಚಿತ ಆರೋಗ್ಯ ತಪಾಸಣೆ ಶಿಬಿರ

ಬ್ಯಾಡಗಿ: ಬಡವರು, ದುರ್ಬಲರು ಹಾಗೂ ಆರ್ಥಿಕವಾಗಿ ತೊಂದರೆಯಲ್ಲಿರುವ ಜನರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಅನುಕೂಲಕರವಾಗಿವೆ ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು.

ತಾಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ವೈದ್ಯಕೀಯ ಪ್ರಕೋಷ್ಟ ಹಾಗೂ ಭಾರತೀಯ ಜನತಾ ಪಾರ್ಟಿ, ಡಾ. ಮಹೇಶ ಸಾಲವಾಡ ಫೌಂಡೇಷನ್, ಕೆಎಲ್‌ಇ ಆಸ್ಪತ್ರೆ, ಬಿಆರ್‌ಇ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಶಿಬಿರ ಆಯೋಜಿಸಲಾಗಿದೆ ಎಂದರು.

ತಾಲೂಕಿನ ವಿವಿಧ ಗ್ರಾಮಗಳ ಸುಮಾರು 232 ಜನ ತಪಾಸಣೆ ಮಾಡಿಸಿಕೊಂಡರು. ಈ ಪೈಕಿ 39 ಜನರಿಗೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು. ವೈದ್ಯರಾದ ಜಯಪ್ರಭಾ ಉತ್ತೂರು, ಪ್ರವೀಣ ಪೂಜಾರ, ಸುನಿಲ್ ಮಳಗಿ, ರವಿ ಸಂಗಾಪುರ, ಸೀತಾ ಮುತಾಲಿಕ, ಶರಣ ಹಳ್ಳದ, ವಿಶಾಖ ಮಧುಕರ, ಪ್ರಿಯಾಂಕ ಯಳಮಲಿ, ತಾಲೂಕು ಬಿಜೆಪಿ ಅಧ್ಯಕ್ಷ ಹಾಲೇಶ ಜಾಧವ, ಪುರಸಭೆ ಸದಸ್ಯ ಚಂದ್ರಪ್ಪ ಶೆಟ್ಟರ, ವೀರೇಂದ್ರ ಶೆಟ್ಟರ, ಈರಣ್ಣ ಚೌಟಿ, ಶಾಂತಪ್ಪ ದೊಡ್ಡಮನಿ, ಸುರೇಶ ಯತ್ನಳ್ಳಿ ಇತರರಿದ್ದರು.