ಕೆ.ಎಂ.ದೊಡ್ಡಿ: ಮಕ್ಕಳ ಬದುಕು ಕಟ್ಟಿಕೊಡಲು ಶ್ರಮಿಸಿದ ಹಿರಿಯರ ತ್ಯಾಗ ಸ್ಮರಿಸುವುದು ಅತ್ಯಗತ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.
ಸಮೀಪದ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಗಾಯಕರ ಟ್ರಸ್ಟ್, ಎಸ್.ಡಿ.ಜಯರಾಂ ಆಸ್ಪತ್ರೆ ಮಂಡ್ಯ ವತಿಯಿಂದ ಆಯೋಜಿಸಿದ್ದ ಅಪ್ಪನ ಸವಿನೆನಪು ಸ್ಮರಣಾರ್ಥ ಅಪ್ಪನ ಪುತ್ಥಳಿ ಅನಾವರಣ, ಆರೋಗ್ಯ ಉಚಿತ ತಪಾಸಣೆ ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ಕಾಲಮಾನದಲ್ಲಿ ಹಿರಿಯರ ಶ್ರಮ ಮತ್ತು ತ್ಯಾಗವನ್ನು ಸ್ಮರಿಸಿಕೊಳ್ಳುವುದು ದೂರವಾಗುತ್ತಿರುವುದನ್ನು ನೋಡಿದ್ದೇವೆ. ಅನೇಕರು ತಮ್ಮ ವಿದ್ಯಾಭ್ಯಾಸ ಮಾಡಿದ ಮೇಲೆ ಉದ್ಯೋಗ ಅಥವಾ ಉದ್ಯಮ ಮಾಡುತ್ತಾರೆ. ಅದರಲ್ಲೇ ಕಳೆದೊಗುವ ಜನರ ನಡುವೆ ತಂದೆ, ತಾಯಿ ಸ್ಮರಿಸಿ ಹುಟ್ಟೂರಿಗೆ ಕೊಡುಗೆ ನೀಡುವುದು ಅಪರೂಪ ಎಂದು ನುಡಿದರು.
ವಿದ್ಯಾಭ್ಯಾಸ ನೀಡಿದ ಶಾಲೆ, ಗ್ರಾಮದಲ್ಲಿ ಕಳೆದ ಬಾಲ್ಯ, ಜೀವನದ ಸಮಯವನ್ನು ಮರೆಯುವ ಜನತೆ ಹೆಚ್ಚಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಡಾ.ಮಾದೇಶ್ ಮತ್ತು ಡಾ.ಕಿರಣ್‌ಕುಮಾರ್ ಅವರು ತಮ್ಮ ಹುಟ್ಟೂರಿನಲ್ಲಿ ಹಿರಿಯರ ಸ್ಮರಣೆಯಲ್ಲಿ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಮಾಡುತ್ತಿರುವುದು ಮಾದರಿ ಎಂದರು.
ಮಾಜಿ ಎಂಎಲ್‌ಸಿ ಡಿ.ಎಸ್.ವೀರಯ್ಯ, ಕವಿ ಡಾ.ಚಂದ್ರಶೇಖರ್, ಮಳವಳ್ಳಿ ತಾಲೂಕು ಆರೋಗ್ಯ ಅಧಿಕಾರಿ ಡಾ.ವೀರಭದ್ರಯ್ಯ, ಜಿಲ್ಲಾ ಗಾಯಕರ ಟ್ರಸ್ಟ್ ಅಧ್ಯಕ್ಷ ಡಾ.ಮಾದೇಶ್, ವೈದ್ಯ ಡಾ.ಕಿರಣ್‌ಕುಮಾರ್, ಗಾಯಕ ಡಾ.ಮಹದೇವಸ್ವಾಮಿ, ಯರಹಳ್ಳಿ ಪುಟ್ಟಸ್ವಾಮಿ ಇತರರಿದ್ದರು. ಇದೇ ವೇಳೆ ಸರ್ಕಾರಿ ಶಾಲಾ ಆವರಣದಲ್ಲಿ ಆರೋಗ್ಯ ತಪಾಸಣೆ ನಡೆಯಿತು. ನಂತರ ಅವರಿಗೆ ಔಷಧ ವಿತರಣೆ ಮಾಡಲಾಯಿತು. ಮಿಮ್ಸ್ ರಕ್ತನಿಧಿ ಕೇಂದ್ರದ ಸಿಬ್ಬಂದಿ ರಕ್ತ ಸಂಗ್ರಹಿಸಿಕೊಅಡರು. ಹಿರಿಯ ನಾಗರಿಕರನ್ನು ಅಭಿನಂದಿಸಲಾಯಿತು.