ಜಿಲ್ಲೆ

ಆರೋಗ್ಯ ಕಾಳಜಿ ವಹಿಸುವುದು ಮುಖ್ಯ: ಸಹ ಪ್ರಾಧ್ಯಾಪಕಿ ಡಾ.ಜಾಹ್ನವಿ ಕಿವಿಮಾತು

ಕೆ.ಎನ್.ರಾಘವೇಂದ್ರ

ಮಂಡ್ಯ: ಮಹಿಳೆಯರು ಕುಟುಂಬದ ನಿರ್ವಹಣೆಯೊಂದಿಗೆ ತಮ್ಮ ಆರೋಗ್ಯದ ಕಾಳಜಿ ವಹಿಸುವುದು ಬಹಳ ಮುಖ್ಯ ಎಂದು ಮಿಮ್ಸ್ ಸಹ ಪ್ರಾಧ್ಯಾಪಕಿ ಡಾ.ಜಾಹ್ನವಿ ರಾಜ್‌ಗೋಪಾಲ್ ಸಲಹೆ ನೀಡಿದರು.

ನಗರದ ಕಲ್ಲಹಳ್ಳಿ ವಿ.ವಿ ನಗರದ ವರಸಿದ್ದಿ ವಿನಾಯಕ ಶ್ರೀಕಂಠೇಶ್ವರ ದೇವಾಲಯ ಆವರಣದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಕುಟುಂಬದ ನಿರ್ವಹಣೆ ಮತ್ತು ಮಕ್ಕಳು, ಪಾಲಕರ ಹಿತಕ್ಕಾಗಿ ಹೆಚ್ಚು ಸಮಯ ಹಾಗೂ ಕಾಳಜಿ ವಹಿಸುವುದು ಹೆಚ್ಚು. ಆದರೆ ಈ ನಡುವೆ ತಮ್ಮ ಆರೋಗ್ಯದ ಬಗ್ಗೆಯೂ ಸಮಯ ಮತ್ತು ಜವಾಬ್ದಾರಿ ನೋಡಿಕೊಳ್ಳುವುದು ಉತ್ತಮ ಎಂದು ಕಿವಿಮಾತು ಹೇಳಿದರು.

ಸಾಮಾನ್ಯವಾಗಿ 40 ವರ್ಷ ವಯೋಮಾನದ ಮಹಿಳೆಯರಲ್ಲಿ ಅರೋಗ್ಯದ ಸಮಸ್ಯೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಒತ್ತಡದ ಜೀವನದಲ್ಲಿ ಬಿ.ಪಿ, ಷುಗರ್, ಮಂಡಿನೋವು ಹಾಗೂ ಸ್ತನ-ಗರ್ಭಕಂಠ ಕ್ಯಾನ್ಸರ್‌ನಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಸಾಧ್ಯತೆ ಇದೆ. ಬದಲಾದ ಆಹಾರ ಶೈಲಿ, ಜೀವನ ಪದ್ಧತಿಯಿಂದ ಮಾನಸಿಕ ಒತ್ತಡವು ಮೂಲ ಕಾರಣವಾಗಬಹುದು. ಇಂತಹ ಆರೋಗ್ಯ ಶಿಬಿರದಲ್ಲಿ ಭಾಗಿಯಾಗಿ ತಪಾಸಣೆ ಮಾಡಿಕೊಳ್ಳಿ ಎಂದರು.

ಸಾಹಿತ್ಯ ಲಯನ್ಸ್ ಸಂಸ್ಥೆ ಅಧ್ಯಕ್ಷೆ ಸಿ.ಜೆ.ಸುಜಾತಕೃಷ್ಣ, ಆರ್.ಶೋಭಾ, ಚಿಕ್ಕತಾಯಮ್ಮ, ಸುಶೀಲಮ್ಮ, ಯಶೋಧಾ, ವರಲಕ್ಷ್ಮೀ, ವಿನುತಾ, ಶಶಿಮಣಿ, ಸರಸ್ವತಿ, ಗಾಯತ್ರಿ ಇತರರಿದ್ದರು. ಇದೇ ವೇಳೆ ಡಾ.ಜಾಹ್ನವಿ, ಡಾ.ವಿದ್ಯಾ, ಡಾ.ಜಯಪ್ರಿಯಾ, ಡಾ.ಸುಶ್ಮಿತಾ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿದರು.