ಸರಗೂರು: ಕಾಡಂಚಿನ ಗ್ರಾಮದ ಜನರ ಆರೋಗ್ಯ ವೃದ್ಧಿಸುವ ಸಲುವಾಗಿ ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರ ಆಯೋಜನೆ ಮಾಡುತ್ತಿರುವುದು ಮೆಚ್ಚುಗೆಯ ವಿಚಾರ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.
ತಾಲೂಕಿನ ಬಿ.ಮಟಕರೆ ಗ್ರಾಪಂ ವ್ಯಾಪ್ತಿಯ ನೆಮ್ಮನಹಳ್ಳಿ ಗ್ರಾಮದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಎಚ್.ಡಿ.ಕೋಟೆ, ಸಾರ್ವಜನಿಕ ಆಸ್ಪತ್ರೆ ಐ.ಸಿ.ಟಿ.ಸಿ. ವಿಭಾಗ ಎಚ್.ಡಿ.ಕೋಟೆ ಸಹಯೋಗದಲ್ಲಿ ಶುಕ್ರವಾರ ಸಮುದಾಯ ಆಧಾರಿತ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನೆಮ್ಮನಹಳ್ಳಿ ಗ್ರಾಮದಲ್ಲಿ 2ನೇ ಬಾರಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದ್ದೇವೆ. ಈ ಶಿಬಿರದಲ್ಲಿ ಕಣ್ಣಿನ ಪರೀಕ್ಷೆ, ಮಧುಮೇಹ ಮತ್ತು ರಕ್ತದೊತ್ತಡ, ಐಸಿಟಿಸಿ ರಕ್ತ ಪರೀಕ್ಷೆ ಸೇರಿ ವಿವಿಧ ತಪಾಸಣೆ ಮಾಡಲಾಗುತ್ತದೆ. ಸುತ್ತಮುತ್ತಲ ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಶಿಬಿರ ಯಶಸ್ವಿಗೊಳಿಸಿ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಇಂತಹ ಆರೋಗ್ಯ ತಪಾಸಣೆ ಶಿಬಿರಗಳು ಇನ್ನೂ ಹೆಚ್ಚು ಆಗಬೇಕಿದೆ. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕ್ಯಾನ್ಸರ್ ತಪಾಸಣೆ ಶಿಬಿರಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸುತ್ತೇವೆ ಎಂದು ಭರವಸೆ ನೀಡಿದರು.
ನಂತರ ಬಿ.ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರದ ನೆಮ್ಮನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದೇವೆ. ನೆಮ್ಮನಹಳ್ಳಿ ಗ್ರಾಮದ ಜನರಿಗೆ ಒಳ್ಳೆಯ ಆರೋಗ್ಯ ಒದಗಿಸುವುದು ಮತ್ತು ಆರೋಗ್ಯದ ಬಗ್ಗೆ ಅರಿವು ನೀಡುವ ಉದ್ದೇಶದಿಂದ ಈ ಗ್ರಾಮವನ್ನು ಆಯ್ಕೆ ಮಾಡಲಾಗಿದೆ ಎಂದರು.
ಈ ಶಿಬಿರದಲ್ಲಿ ಬಿಪಿ-ಶುಗರ್ ತಪಾಸಣೆ, 40 ಜನರಿಗೆ ಕಣ್ಣಿನ ಪರೀಕ್ಷೆ, 60 ಜನರಿಗೆ ಐಸಿಟಿಸಿ ಪರೀಕ್ಷೆ ನಡೆಸಲಾಯಿತು. ದಂತ ತಜ್ಞೆ ಡಾ.ಪೂರ್ಣಿಮಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಭಾಗ್ಯಮ್ಮ, ನಾಗೇಂದ್ರ, ನಾಗನಾಯ್ಕ ,ಬೊಮ್ಮ, ಡಾ.ಹೇಮಲತಾ , ಶರಣಪ್ಪ, ರವಿರಾಜ್, ನಾಗರಾಜು, ಉಮೇಶ್, ಮಹೇಶ್, ಲೋಲಾಕ್ಷಿ ,ಮಹದೇವ್, ಜಲಜಾ, ಜಯಲಕ್ಷ್ಮೀ, ಗಿರೀಶ್, ಆಶಾ ಕಾರ್ಯಕರ್ತೆ ಇದ್ದರು.