ಬೆಂಗಳೂರು: ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಸಮಿತಿ ಕುರುಬರಹಳ್ಳಿ ಬಯಲು ರಂಗ ಮಂದಿರದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಕಣ್ಣಿನ ತಪಾಸಣೆ ಶಿಬಿರ ಹಾಗೂ ಉಚಿತ ಔಷಧಿ ವಿತರಣೆ ಕಾರ್ಯಕ್ರಮಕ್ಕೆ ಸಚಿವ ರಾಮಲಿಂಗಾರೆಡ್ಡಿ ಭಾನುವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಪ್ರತಿಯೊಬ್ಬರು ದೇಹದಲ್ಲಿ ಸಮಸ್ಯೆ ಇರಲಿ ಅಥವಾ ಇಲ್ಲದಿರಲಿ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಂಡು, ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳಿತು. ಏನಾದರೂ ಸಮಸ್ಯೆ ಇದ್ದು, ಅಗತ್ಯವಿದ್ದರೆ ಚಿಕಿತ್ಸೆ ಪಡೆದುಕೊಳ್ಳಬಹುದು. ಆರೋಗ್ಯವಂತ ಸಮಾಜವಿದ್ದಾಗ, ಸಮಾಜದ ಅಭವೃದ್ದಿ ಸಾಧ್ಯ ಈನಿಟ್ಟಿನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಬಡವರಿಗೆ ಹೈಟೆಕ್ ವೈದ್ಯಕೀಯ ಸೌಲಭ್ಯಗಳನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದೆ. ಶಕ್ತಿ ಯೋಜನೆಯಿಂದ 500ಕೋಟಿ ಬಾರಿ ಮಹಿಳೆಯರು ಪ್ರಯಾಣಿಸಿ, ದೇಶದಲ್ಲಿಯೆ ವಿನೂತನ ದಾಖಲೆಯಾಗಿದೆ. ಶಕ್ತಿ ಯೋಜನೆಯಿಂದ ನಾಡಿನ ಎಲ್ಲ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ ಮತ್ತು ದೇವಸ್ಥಾನಕ್ಕೆ ಅದಾಯ ಹೆಚ್ಚಳದ ಜೊತೆಗೆ ದೇವಸ್ಥಾನದ ಸುತ್ತಮುತ್ತಲು ವ್ಯಾಪಾರ, ವಹಿವಾಟುಗಳು ಹೆಚ್ಚಾಗಿ ಆರ್ಥಿಕವಾಗಿ ಸಧೃಡರಾಗಿದ್ದಾರೆ ಎಂದು ಹೇಳಿದರು.
ಮುಖಂಡರಾದ ಎಸ್.ಕೇಶವಮೂರ್ತಿ ಮಾತನಾಡಿ ಬಡವರ ಆರೋಗ್ಯ ಸುರಕ್ಷತೆಗೆ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ. ಬ್ಲಾಕ್ ಕಾಂಗ್ರೆಸ್ ಸಮಿತಿಯು ಸಹ ಜನರ ಆರೋಗ್ಯವಂತರಾಗಬೇಕು ಎಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದೆ ಎಂದರು.
ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪುಣ್ಯ ಆಸ್ಪತ್ರೆ , ನೇತ್ರಧಾಮ ಆಸ್ಪತ್ರೆ ವೈದ್ಯರು ಸಿಬ್ಬಂದಿಗಳು ಭಾಗವಹಿಸಿದ್ದರು. ಶಿಬಿರದಲ್ಲಿ ಕಿವಿ,ಮೂಗು, ಗಂಟಲು ಜನರಲ್ ತಪಾಸಣೆ, ಸ್ತ್ರೀ ರೋಗ ತಪಾಸಣೆ , ಮಧುಮೇಹ, ಬಿಪಿ ಮತ್ತು ಇಸಿಜಿ, ಹಿಮೋಗ್ಲೋಬಿನ್ ಪರೀಕ್ಷೆಯನ್ನು ನೂರಾರು ಜನರಿಗೆ ಮಾಡಲಾಯಿತು.
ಕಾಂಗ್ರೆಸ್ ಮುಖಡರಾದ ವಿ.ಎಸ್.ಆರಾಧ್ಯ, ಶಿವಕುಮಾರ್, ಸುಧೀಂದ್ರ, ಪರಿಸರ ರಾಮಕೃಷ್ಣ, ಗ್ಯಾರಂಟಿ ಯೋಜನೆಗಳ ನಗರ ಉಪಾಧ್ಯಕ್ಷ ಜನಾರ್ಧನ್, ಸೇವಾದಳ ಬ್ಲಾಕ್ ಅಧ್ಯಕ್ಷ ಕೃಷ್ಣ ಬಿಸ್ಟ್ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಕಾರ್ಯಕರ್ತರು ಭಾಗವಹಿಸಿದ್ದರು.