ಜಿಲ್ಲೆ

ಜೂ.30ರವರೆಗೆ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಉಚಿತ ಸಾಮಾನ್ಯ ಹೆರಿಗೆ ಸೌಲಭ್ಯ

ಮೈಸೂರು: ಜೆಎಸ್‌ಎಸ್ ಮಹಾ ವಿದ್ಯಾಪೀಠದ 70ನೇ ವರ್ಷಾಚರಣೆ ಹಾಗೂ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಜೂ.30ರವರೆಗೆ ಉಚಿತ ಸಾಮಾನ್ಯ ಹೆರಿಗೆ ಸೌಲಭ್ಯ ಹಾಗೂ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ಮತ್ತು ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಸವನಗೌಡಪ್ಪ ತಿಳಿಸಿದರು.
ಈ ಅಭಿಯಾನ ವೇಳೆ ಸಾಮಾನ್ಯ ಹೆರಿಗೆ ಮತ್ತು ಔಷಧಗಳು ಸಂಪೂರ್ಣ ಉಚಿತವಾಗಿರುತ್ತವೆ. ಅಲ್ಲದೆ ಸಿಸೇರಿಯನ್‌ಗೆ ಶೇ.40ರಿಂದ 50ರಷ್ಟು ರಿಯಾಯಿತಿ ಇರಲಿದೆ. ಜನಿಸಿದ ಮಗು ಹೆಚ್ಚಿನ ಚಿಕಿತ್ಸೆಗೆ ದಾಖಲಾದರೆ ಚಿಕಿತ್ಸೆ ವೆಚ್ಚದಲ್ಲಿ ರಿಯಾಯಿತಿ ಹಾಗೂ ಆಸ್ಪತ್ರೆಯಿಂದ 25 ಕಿ.ಮೀ. ವ್ಯಾಪ್ತಿಯಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಇರಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿ ತಿಳಿಸಿದರು.
ಜೂ.30ರೊಳಗೆ ನೋಂದಣಿ ಆದವರಿಗೂ ಈ ಸೌಲಭ್ಯ ದೊರೆಯಲಿದೆ. ಇನ್ನು ಸಾಮಾನ್ಯ ವಾರ್ಡ್‌ಗೆ ಮಾತ್ರ ಈ ಸೌಲಭ್ಯ ಇದ್ದು, ಹೆಚ್ಚಿನ ಮಾಹಿತಿಗೆ ಮೊ.8296673241 ಸಂಪರ್ಕಿಸಬಹುದಾಗಿದೆ ಎಂದರು.
ವೈದ್ಯರಾದ ಡಾ.ಸಿ.ಪಿ.ಮಧು, ಡಾ.ಮಮತಾ, ಡಾ.ನವೀನ್ ಇದ್ದರು.