ಜಿಲ್ಲೆ

ಶರಣರ ಆಶಯದಂತೆ ವ್ಯಸನಮುಕ್ತರಾಗಿ

ಸದೇಶ್ ಕಾರ್ಮಾಡ್

ಮೈಸೂರು : ಶರಣರ ಆಶಯದಂತೆ ವ್ಯಸನದಿಂದ ಹೊರ ಬಂದು ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪಿ.ದೇವರಾಜು ಚಿಕ್ಕಹಳ್ಳಿ ಹೇಳಿದರು.

ಬಸವಮಾರ್ಗ ಫೌಂಡೇಶನ್ ವತಿಯಿಂದ ಬುಧವಾರ ಹೆಬ್ಬಾಳಿನ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವ್ಯಸನಕ್ಕೆ ದಾಸನಾದ ವ್ಯಕ್ತಿಯು ಜೀವನದಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಚಟಕ್ಕೆ ಬಲಿಯಾದವರು ನಾನಾ ಸಮಸ್ಯೆಗೆ ಸಿಲುಕಿಹಾಕಿಕೊಳ್ಳುತ್ತಾರೆ. ಮೌಢ್ಯಕ್ಕೆ ಬಲಿಯಾಗುತ್ತಾರೆ. ಇದರಿಂದ ಹೊರಬರಬೇಕು. ಆ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ತಾವೇಲ್ಲರೂ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.

12ನೇ ಶತಮಾನದಲ್ಲಿ ಕ್ರಾಂತಿಕಾರಿ ಬಸವಣ್ಣ ಅವರು ಹಲವಾರು ಕ್ರಾಂತಿಕಾರಿ ಬದಲಾವಣೆಯನ್ನು ಸಮಾಜದಲ್ಲಿ ಜಾರಿಗೆ ತಂದರು. ಅದರಲ್ಲಿ ವ್ಯಸನಮುಕ್ತ ಕಾರ್ಯಕ್ರಮವೂ ಕೂಡ ಒಂದು. ಆ ಸಮಯದಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ದೊಡ್ಡ ಹೋರಾಟವನ್ನೇ ಮಾಡಿದರೂ ಬಸವಣ್ಣ. ಈಗ ಅದೇ ಮಾರ್ಗದಲ್ಲಿ 21ನೇ ಶತಮಾನದಲ್ಲಿ ಎಸ್. ಬಸವಣ್ಣ ಅವರು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ಎಂದರು.

ಮೌಢ್ಯದಿಂದ ನಮ್ಮ ಜೀವನೇವನ್ನೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ಇದರಿಂದ ಮನೆಯಲ್ಲಾಗಲಿ, ಸಮಾಜದಲ್ಲಾಗಲಿ ವ್ಯಸನಿಗಳಿಗೆ ಯಾವುದೇ ಬೆಲೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಮೌಢ್ಯವನ್ನು ತೊರೆದು ಶರಣರ ಆಶಯದಂತೆ ನಾವೆಲ್ಲರು ಸಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಶರಣರ ವಚನಗಳ ಅಧ್ಯಯನ ಅತಿ ತುರ್ತಾಗಿ ನಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಬಸವಮಾರ್ಗ ಸಂಸ್ಥೆಯ ಅಧ್ಯಕ್ಷ ಬಸವಣ್ಣ ಮಾತನಾಡಿ, ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರ ಜಗಜ್ಯೋತಿ ಬಸವಣ್ಣ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿದೆ. ಇದುವರೆಗೂ 10 ಸಾವಿರಕ್ಕೂ ಹೆಚ್ಚು ವ್ಯಸನಿಗಳು ನಮ್ಮ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದು ಹೊರ ಹೋಗಿದ್ದಾರೆ. ಅವರೆಲ್ಲ ಉತ್ತಮ ಜೀವನ ಸಾಗಿಸುತ್ತಿದ್ದಾರೆ. ಸಂಸ್ಥೆಯ ಈ ಯಶಸ್ಸಿನ ಹಿಂದೆ ಇರುವುದು ಶರಣ ಚಿಂತನೆಗಳು. ಅವರ ಆಶಯದ ಅನುಸಾರವಾಗಿ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿದೆ ಎಂದರು.

ಬಸವಮಾರ್ಗ ಕೇಂದ್ರದಲ್ಲಿ ಜಾತಿ, ಮತ, ಬೇಧವಿಲ್ಲ. ಇಲ್ಲಿಗೆ ಬಂದವರಿಗೆ ನೀವು ಯಾವ ಜಾತಿ, ಧರ್ಮದವರು ಎಂದು ಕೇಳುವುದಿಲ್ಲ. ಜಾತಿ, ಧರ್ಮ ರಹಿತವಾಗಿ ಇಲ್ಲಿ ಸೇವೆ ನೀಡಲಾಗುತ್ತದೆ. 12 ನೇ ಶತಮಾನದ ಅನುಭವ ಮಂಟಪದ ಮಾದರಿಯಲ್ಲಿ ಇಲ್ಲಿ ಕಾಯಕ, ದಾಸೋಹ ನಡೆಯುತ್ತದೆ. ವ್ಯಸನಿಗಳನ್ನು ಯಾರೇ ತಿರಸ್ಕರಿಸಿದರೂ ಬಸವಮಾರ್ಗ ತಿರಸ್ಕಾರ ಮಾಡುವುದಿಲ್ಲ. ಅವರಿಗೆಂದೆ ಸಂಸ್ಥೆ ಸದಾ ಬಾಗಿಲು ತೆರೆದಿದೆ. ವ್ಯಸನಿಗೆ ಹೊಸ ಜೀವನ ಕಲ್ಪಿಸಿಕೊಡಲು ನನ್ನ ಉಸಿರು ಇರುವ ವರೆವಿಗೂ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕರಾದ ಬಾಲಸುಬ್ರಹ್ಮಣ್ಯಂ, ಆನಂದ್, ಸಂಜಯ್, ಯೋಗ ಶಿಕ್ಷಕ ಎಚ್.ಪಿ.ನವೀನ್ ಕುಮಾರ್, ಸಿಬ್ಬಂದಿ ರಾಘವೇಂದ್ರ, ಮಹೇಶ್, ಪ್ರಶಾಂತ್ ಇತರರು ಇದ್ದರು.