ಜಿಲ್ಲೆ

ಉಚಿತ ಫುಟ್‌ಪಲ್ಸ್ ಥೆರಪಿ ಶಿಬಿರಕ್ಕೆ ಚಾಲನೆ

ಆರ್.ಕೃಷ್ಣ

ಮೈಸೂರು: ವಿಜಯನಗರ ಒಂದನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಬಳಿ ಇರುವ ಉದ್ಯಾನದಲ್ಲಿ ಕಂಪನಿಯೋ ಸಂಸ್ಥೆ ಸಹಯೋಗದಲ್ಲಿ ಉಚಿತ ಫುಟ್‌ಪಲ್ಸ್ ಥೆರಪಿ ಶಿಬಿರಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಮಾರ್ಚ್ 29ರವರೆಗೆ ನಿತ್ಯ ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಆಯೋಜಿಸಿರುವ ಶಿಬಿರಕ್ಕೆ ಚಾಲನೆ ನೀಡಿದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಉದಯ್ಕುಮಾರ್ ಅವರು, ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ. ಹಾಗಾಗಿ ಈ ರೀತಿಯ ಕಾರ್ಯಕ್ರಮಗಳಲ್ಲಿ ನಿವಾಸಿಗಳು ಭಾಗಿಯಾಗಿ ಪ್ರಯೋಜನ ಪಡೆದುಕೊಳ್ಳುವಂತೆ ಕೋರಿದರು.

ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಎ ರವಿ ಮಾತನಾಡಿ, ಶಿಬಿರವು ಉಚಿತವಾಗಿದ್ದು, ಸಂಬಂಧಪಟ್ಟವರು ಸದ್ಬಳಕೆ ಮಾಡಿಕೊಳ್ಳಬೇಕು. ಆರೋಗ್ಯದ ದೃಷ್ಟಿಯಿಂದ ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಿ. ವ್ಯಕ್ತಿಗಳ ಸಾಧಕ-ಬಾಧಕ ಗಳನ್ನು ಗಮನಿಸಿ ವೈದ್ಯರನ್ನು ಸಂಪರ್ಕಿಸಿ ಹಾಗೂ ಇಂತಹ ಚಿಕಿತ್ಸೆ ಯಾರಿಗೆ ಅವಶ್ಯಕತೆ ಇದೆಯೋ ಅಂತಹ ನಿವಾಸಿಗಳು ಥೆರಪಿ ಪಡೆದುಕೊಳ್ಳಬಹುದು ಎಂದರು.

ಸಂಸ್ಥೆಯ ಪರವಾಗಿ ಚಂದನ ಹಾಗೂ ಶಿವರಾಜ್ ಅವರು ಶಿಬಿರದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಿದರು. ಸಂಘದ ನಿರ್ದೇಶಕರಾದ ಮೂರ್ತಿ, ಪಿಎಂಎಸ್‌ಗೌಡ, ಚಂದ್ರಶೇಖರ್, ಜಯಲಕ್ಷ್ಮೀ, ಗೋಪಾಲಸ್ವಾಮಿ ಇತರರು ಇದ್ದರು.