ಜಿಲ್ಲೆ

ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಕೋಟ್ಯಂತರ ಜನ: ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿಕೆ

ಕೆ.ಎನ್.ರಾಘವೇಂದ್ರ

ಶ್ರೀರಂಗಪಟ್ಟಣ: ಪ್ರಸ್ತುತ ಭಾರತದಲ್ಲಿ ಸುಮಾರು 25 ಲಕ್ಷ ಕುರುಡರು ಇದ್ದು, ಎರಡು ಕೋಟಿಗೂ ಹೆಚ್ಚು ಜನ ವಿವಿಧ ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್‌ನ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿದರು.

ತಾಲೂಕಿನ ಅರಕೆರೆ ಗ್ರಾಮದ ಚನ್ನಕೇಶ್ವರ ಸಮುದಾಯ ಭವನದಲ್ಲಿ ಸರ್ವೋದಯ ಅಲಯನ್ಸ್ ಸಂಸ್ಥೆ ಅರಕೆರೆ, ಗ್ರಾಮ ಪಂಚಾಯಿತಿ ಅರಕೆರೆ ಹಾಗೂ ವರ್ಧಮಾನ್ ನೇತ್ರಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಶಿಬಿರ ಹಾಗೂ ನೇತ್ರದಾನ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಣ್ಣು ಮನುಷ್ಯನ ಮುಖ್ಯವಾದ ಅಂಗ. ಕಣ್ಣಿಲ್ಲದಿದ್ದರೆ ಈ ಸುಂದರವಾದ ಪ್ರಪಂಚವನ್ನೇ ನೋಡಲು ಸಾಧ್ಯವಾಗುತ್ತಿರಲಿಲ್ಲ. ಕಣ್ಣಿಲ್ಲದಿದ್ದರೆ ಏನಾಗುತ್ತಿತ್ತು ಎಂಬುದನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ ಎಂದರು.

ಇತ್ತೀಚಿನ ದಿನಗಳಲ್ಲಿ ಅತಿಯಾದ ಮೊಬೈಲ್ ಮತ್ತು ಲ್ಯಾಪ್‌ಟ್ಯಾಪ್ ಬಳಕೆ ಅನಿಯಂತ್ರಿತ ಮಧುಮೇಹ, ರಕ್ತದೊತ್ತಡ ಇನ್ನಿತರೆ ಹಲವಾರು ಆರೋಗ್ಯ ಸಮಸ್ಯೆಗಳು, ಪೌಷ್ಟಿಕಾಂಶದ ಆಹಾರ ಕೊರತೆ ಕಣ್ಣಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಇದರಿಂದ ಕಣ್ಣಿನ ಪೊರೆ ಗ್ಲುಕೋಮ ಡಯಾಬಿಟಿಕ್ ರೆಟಿನೋಪತಿ ಸೇರಿದಂತೆ ಇತರೆ ದೀರ್ಘಕಾಲದ ಕಣ್ಣಿನ ಅಸ್ವಸ್ಥತೆ ಹೆಚ್ಚಾಗುತ್ತಿದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದು, ಪೌಷ್ಟಿಕಾಂಶದ ಆಹಾರ ಸೇವನೆ ಹಾಗೂ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಮನುಷ್ಯ ತನ್ನ ಮರಣ ನಂತರ ಕಣ್ಣನ್ನು ದಾನ ಮಾಡುವ ಪ್ರೌವೃತ್ತಿಯನ್ನು ಬೆಳೆಸಿಕೊಳ್ಳಬೇಕು. ತಾವು ಮಾಡುವ ಕಣ್ಣಿನ ದಾನದಿಂದ ನಾಲ್ಕು ಜನ ಕುರುಡರಿಗೆ ದೃಷ್ಟಿ ಕೊಡಬಹುದು. ಶಿಬಿರದಲ್ಲಿ ಕಣ್ಣಿನ ಉಚಿತ ತಪಾಸಣೆ ಹಾಗೂ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಸೌಲಭ್ಯವಿದೆ. ಆಯ್ದ ಹಿರಿಯರಿಗೆ ಉಚಿತ ಕನ್ನಡಕ ವಿತರಣೆ ಮಾಡುತ್ತಿದ್ದು, ಈ ಸೌಲಭ್ಯವನ್ನ ನಾಗರಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಅಲಯನ್ಸ್ ಸಂಪುಟ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್, ಸರ್ವೋದಯ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಎ.ಆರ್.ಅನಿಲ್ಬಾಬು, ಹಿರಿಯ ನೇತ್ರ ತಜ್ಞ ವಿ.ಎನ್.ಅರುಣ್, ಸಹಾಯಕಿ ಪವಿತ್ರಾ, ವಿಷ್ಣು, ಅರಕೆರೆ ಗ್ರಾಪಂ ಅಧ್ಯಕ್ಷ ಎಂ.ಕೆ.ಮಂಜುನಾಥ್, ಅಲಯನ್ಸ್ ಸಂಸ್ಥೆ ಯ ಚಂದ್ರಶೇಖರ್, ಚನ್ನೇಗೌಡ, ಸೋಮಶೇಖರ್, ಜಗದೀಶ್, ನಾಗೇಂದ್ರ, ವಕೀಲರಾದ ಶಿವಶಂಕರ್, ಮೀನಾಕ್ಷಿ, ಪೀ.ಹಳ್ಳಿ ರಮೇಶ್, ಪುರುಷೋತ್ತಮ್, ಉಮಾಶಂಕರ್ ಇತರರಿದ್ದರು.

ಶಿಬಿರದಲ್ಲಿ 120ಕ್ಕೂ ಹೆಚ್ಚು ಜನರನ್ನು ತಪಾಸಣೆ ಮಾಡಿ 20 ಜನರನ್ನು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಇದೇ ವೇಳೆ 15 ಜನರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು.