ಜಿಲ್ಲೆ

ಜನಸೇವೆಗೆ ಡಾ. ಕೃಷ್ಣಪ್ರಸಾದ ಮಾದರಿ...

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

ನೇತ್ರ ತಪಾಸಣಾ ಉಚಿತ ಶಿಬಿರ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ನೇತ್ರ ತಜ್ಞರಾದ ಡಾ. ಕೃಷ್ಣ ಪ್ರಸಾದ ಅವರು ನಡೆಸುವ ನೇತ್ರಗಳ ಆರೋಗ್ಯ ಶಿಬಿರಗಳಿಂದ ಲಕ್ಷಾಂತರ ಜನರಿಗೆ ಪ್ರಯೋಜನವಾಗಿದೆ. ಅವರು ವಿವಿಧೆಡೆ ತನ್ನ ಆಸ್ಪತ್ರೆಯ ಹಲವು ಶಾಖೆಗಳಿಂದ ಜನಸೇವೆಯಲ್ಲಿ ತೊಡಗಿದ್ದಾರೆ. ಅವರ ಈ ಮಾದರಿ ಕಾರ್ಯವು ನಮಗೂ ಸಹ ವಿದೇಶಗಳಲ್ಲಿ ಮಠದ ಶಾಖೆಗಳನ್ನು ತೆರೆದು ಧರ್ಮ ಪ್ರಚಾರ ನಡೆಸಲು ಪ್ರೇರಣೆಯಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡುಪಿಯ ರಾಜಾಂಗಣದಲ್ಲಿ ನೇತ್ರಜ್ಯೋತಿ ಚಾರಿಟೇಬಲ್​ ಟ್ರಸ್ಟ್​ ಉಡುಪಿ, ಪ್ರಸಾದ ನೇತ್ರಾಲಯ ಸೂಪರ್​ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಜಿಲ್ಲಾ ಆರೋಗ್ಯ ಇಲಾಖೆಯ ಅಂಧತ್ವ ನಿಯಂತ್ರಣ ವಿಭಾಗ ಹಾಗೂ ಬೆಂಗಳೂರಿನ ಅಲೋಕ ಮಿಷನ್​ಫೌಂಡೇಷನ್​-ಕಾರ್ಲ್​ ಜೈಸ್​ ಇಂಡಿಯಾ ಸಹಭಾಗಿತ್ವದಲ್ಲಿ ಆಗಸ್ಟ್​ 31ರಂದು ಬೆಳಗ್ಗೆ ಆಯೋಜಿಸಿದ್ದ ನೇತ್ರ ತಪಾಸಣೆ ಹಾಗೂ ಕನ್ನಡ ಉಚಿತ ವಿತರಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ನನಗೆ ಶ್ರೀಗಳೇ ಪ್ರೇರಣೆ

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಸಾದ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣ ಪ್ರಸಾದ ಕೂಡ್ಲು ಮಾತನಾಡಿ, ಪುತ್ತಿಗೆ ಸುಗುಣೇಂದ್ರ ಶ್ರೀಗಳು ನಡೆಸುತ್ತಿರುವ ಸಮಾಜ ಸೇವೆ ನಮಗೆ ಪ್ರೇರಣೆಯಾಗಿದೆ. ನಾವು ಆಯೋಜಿಸುವ ನೇತ್ರ ಸಂಬಂಧಿತ ಎಲ್ಲ ಸೇವೆಗಳೂ ಸಹ ಶ್ರೀಗಳ ಆಶೀರ್ವಾದದಿಂದಲೇ ನಡೆಯುತ್ತಿದೆ. ಪ್ರತಿವರ್ಷವೂ ಸಹ ಶ್ರೀಗಳ ಜನ್ಮನಕ್ಷತ್ರದಂದು ನೇತ್ರ ತಪಾಸಣಾ ಉಚಿತ ಶಿಬಿರಗಳನ್ನು ನಡೆಸಲಿದ್ದೇವೆ ಎಂದು ತಿಳಿಸಿದರು.

ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ ಭಟ್​ ಉಪಸ್ಥಿತರಿದ್ದರು.

ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಮಧ್ವ ವಲ್ಲಭ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಇಪ್ಪತ್ತು ಜನರಿಗೆ ಶಸ್ತ್ರ ಚಿಕಿತ್ಸೆಯ ವ್ಯವಸ್ಥೆ

ಬೆಳಗ್ಗೆ 9:30ರಿಂದ ಮಧ್ಯಾಹ್ನ 1:30ರ ವರಗೆ ನಡೆದ ನೇತ್ರ ತಪಾಸಣಾ ಶಿಬಿರದಲ್ಲಿ ನೂರಕ್ಕೂ ಅಧಿಕ ಜನರು ಪ್ರಯೋಜನ ಪಡೆದರು. ಸುಗುಣೇಂದ್ರ ಶ್ರೀಗಳ ಕಣ್ಣುಗಳನ್ನು ತಪಾಸಣೆ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು. 20 ಜನರಿಗೆ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು. 51 ಜನರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಗುವುದು ಎಂದು ಸಂಘಟಕರು ತಿಳಿಸಿದರು.