ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ
ಇತ್ತೀಚಿನ ದಿನಗಳಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದಾಗಿ ಮಕ್ಕಳಲ್ಲಿ ದೃಷ್ಟಿದೋಷ ಕಂಡು ಬರುತ್ತಿದ್ದು, ಈ ಬಗ್ಗೆ ಜಾಗೃತಿ ಅಗತ್ಯ. ಶಿಬಿರಗಳ ಮೂಲಕ ಮಕ್ಕಳ ಕಣ್ಣಿನ ತಪಾಸಣೆ ನಡೆಸುವುದಲ್ಲದೆ, ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ನ್ಯೂ ವಿಷನ್ ಕಾರ್ಯಕ್ರಮದ ಮ್ಯಾನೇಜರ್ ಡಾ.ರಾಮಚಂದ್ರ ಹೇಳಿದರು.
ಮಾಡ್ನೂರು ಗ್ರಾಮದ ನನ್ಯದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೊಸೈಟಿಯ ಅಂಧತ್ವ ವಿಭಾಗದ ವತಿಯಿಂದ ಅರಿಯಡ್ಕ ಗ್ರಾಮ ಪಂಚಾಯಿತಿ ಸಹಕಾರದಲ್ಲಿ ನಡೆದ ಕಣ್ಣಿನ ಉಚಿತ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕಾವು ಲಯನ್ಸ್ ಕ್ಲಬ್ ಅಧ್ಯಕ್ಷ ಜಗನ್ನಾಥ ರೈ ಗುತ್ತು ಉದ್ಘಾಟಿಸಿ ಮಾತನಾಡಿ, ಜನತೆಗೆ ಉಪಯುಕ್ತವಾದ ಸಮಾಜಮುಖಿ ಕಾರ್ಯಗಳನ್ನು ಮಾಡುವಲ್ಲಿ ತುಡರ್ ಯುವಕ ಮಂಡಲ ಮುಂಚೂಣಿಯಲ್ಲಿದ್ದು, ಯುವಕ ಮಂಡಲದ ಎಲ್ಲ ಕೆಲಸಗಳು ಬಹಳಷ್ಟು ಪರಿಣಾಮಕಾರಿಯಾಗಿವೆ ಎಂದರು.
ತುಡರ್ ಯುವಕ ಮಂಡಲದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ನನ್ಯ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ರಾಮಣ್ಣ ಡಿ.ಆಚಾರಿಮೂಲೆ, ತುಡರ್ ಯುವಕ ಮಂಡಲದ ಗೌರವಾಧ್ಯಕ್ಷರಾದ ರಾಮಣ್ಣ ನಾಯ್ಕ ಮತ್ತು ಶೇಸಪ್ಪ ಗೌಡ ಪರನೀರು, ಪದಾಧಿಕಾರಿಗಳಾದ ಹರ್ಷಿತ್ ಎ.ಆರ್., ಲಿಂಗಪ್ಪ ನಾಯ್ಕ, ಜಗನ್ನಾಥ ಗೌಡ ಪರನೀರು, ಭವಿತ್ ರೈ, ರತೀಶ್ ಕೌಡಿಚ್ಚಾರು, ನಿರಂಜನ್ ರಾವ್, ರಮೇಶ್ ಗೌಡ ಆಚಾರಿಮೂಲೆ, ಬಾಲಕೃಷ್ಣ ಪಾಟಾಳಿ ನನ್ಯ, ರಾಜೇಶ್ ಬಿ.ಉಪಸ್ಥಿತರಿದ್ದರು.
ತುಡರ್ ಯುವಕ ಮಂಡಲದ ಉಪಾಧ್ಯಕ್ಷ ಯತೀಶ್ ರೈ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಜಗದೀಶ್ ನಾಯ್ಕ ಆಚಾರಿಮೂಲೆ ವಂದಿಸಿದರು. ಮಾಜಿ ಅಧ್ಯಕ್ಷ ಸುನೀಲ್ ನಿಧಿಮುಂಡ ನಿರೂಪಿಸಿದರು.
ಕಂಪ್ಯೂಟರೀಕೃತ ವ್ಯವಸ್ಥೆಯೊಂದಿಗೆ ನಡೆದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ 115 ಮಂದಿ ಭಾಗವಹಿಸಿ, ಶಿಬಿರದ ಪ್ರಯೋಜನ ಪಡೆದುಕೊಂಡರು. ಈ ಪೈಕಿ ದೃಷ್ಟಿ ದೋಷವಿರುವ 85 ಮಂದಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. ಡಾ.ರಾಮಚಂದ್ರ, ಅಭಿಲಾಷ್, ರಕ್ಷತಾ ಮತ್ತು ಪ್ರಜ್ಞಾ ಶಿಬಿರ ನಡೆಸಿಕೊಟ್ಟರು.