ಜಿಲ್ಲೆ

ದೇಗುಲಕ್ಕೆ ಎಲ್ಲರಿಗೂ ಮುಕ್ತಪ್ರವೇಶ

ಕೋಲಾರ ಡೆಸ್ಕ್

ಎನ್​.ಮುನಿವೆಂಕಟೇಗೌಡ, ಕೋಲಾರ

ಅಸ್ಪಶ್ಯತೆ ನಿವಾರಣೆಗಾಗಿ ರಾಜ್ಯಾದ್ಯಂತ ಹಲವು ಅಭಿಯಾನ ಹಮ್ಮಿಕೊಂಡಿರುವ ಅರಿವು ಭಾರತ ಸಂಸ್ಥೆ, ಇದರ ಮೊದಲ ಹೆಜ್ಜೆಯಾಗಿ ದಶಕದ ಹಿಂದೆ ಜಿಲ್ಲೆಯಲ್ಲಿಯೇ ಆರಂಭಿಸಿದ್ದ ದೇವಸ್ಥಾನಗಳ ಆವರಣದಲ್ಲಿ "ಜಾತಿ, ಧರ್ಮ, ಲಿಂಗ ಭೇದವಿಲ್ಲದೆ ಎಲ್ಲ ಸಮುದಾಯದವರಿಗೂ ಮುಕ್ತಪ್ರವೇಶ' ಎಂಬ ನಾಮಲಕ ಅಳವಡಿಸುವ ಕಾರ್ಯವನ್ನು ಮತ್ತೆ ಕೈಗೆತ್ತಿಕೊಂಡಿದೆ.

ಅಸ್ಪಶ್ಯತೆ ಹೋಗಲಾಡಿಸಲು ದಲಿತರ ಮನೆಗಳ ಗೃಹಪ್ರವೇಶಕ್ಕೆ ಸವರ್ಣೀಯರು, ಸವರ್ಣೀಯರ ಮನೆಗಳಿಗೆ ದಲಿತರನ್ನು ಕರೆದೊಯ್ಯುವುದು, ಸಹಭೋಜನ ಕೂಟ ಸೇರಿ ಹಲವು ಅಭಿಯಾನಗಳನ್ನು ಅರಿವು ಭಾರತ ಸಂಸ್ಥೆ ಈಗಾಗಲೇ ಹಮ್ಮಿಕೊಂಡಿದೆ. ಇದೇ ರೀತಿ ದಶಕದ ಹಿಂದೆ ಜಿಲ್ಲೆಯಲ್ಲಿ ಆರಂಭಗೊಂಡಿದ್ದ "ದೇಗುಲಗಳಿಗೆ ಮುಕ್ತ ಪ್ರವೇಶ' ನಾಮಲಕ ಅಳವಡಿಕೆ ಕಾರ್ಯ ಕೆಲ ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು. ಇದೀಗ ಮತ್ತೇ ಆಯಾ ಜಿಲ್ಲಾಡಳಿತ ಹಾಗೂ ಮುಜರಾಯಿ ಇಲಾಖೆಗಳ ಸಹಯೋಗದೊಂದಿಗೆ ದೇಗುಲಗಳ ಆವರಣದಲ್ಲಿ ನಾಮಲಕ ಅಳವಡಿಕೆಗೆ ಸಂಸ್ಥೆ ಮುಂದಾಗಿದೆ.

ದಿ.ಡಿ.ಕೆ.ರವಿ ಆರಂಭಿಸಿದ ಸಂಸ್ಥೆ

2014ರಲ್ಲಿ ಕೋಲಾರ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಅವರು ಅಸ್ಪಶ್ಯತೆಯನ್ನು ಹೋಗಲಾಡಿಸಲು ಅರಿವು ಭಾರತ ಸಂಸ್ಥೆಯನ್ನು ಅರಿವು ಶಿವಪ್ಪ ನೇತೃತ್ವದಲ್ಲಿ ಕೋಲಾರದಲ್ಲಿ ಹುಟ್ಟುಹಾಕಿ, ಪ್ರಥಮ ಬಾರಿಗೆ ದಲಿತ ಮನೆಗಳಿಗೆ ಗೃಹಪ್ರವೇಶ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ರೂಪಿಸಿದರು. ನಂತರ ಮುಜರಾಯಿ ದೇವಸ್ಥಾನಗಳಿಗೆ ಮುಕ್ತವಾಗಿ ಎಲ್ಲ ಸಮುದಾಯಗಳವರು ಜಾತಿ ಭೇದವಿಲ್ಲದೆ ಪ್ರವೇಶ ಮಾಡಬೇಕು. ಅದಕ್ಕೆ ಸರ್ಕಾರ ಆದೇಶ ಹೊರಡಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಡಿ.ಕೆ.ರವಿ ಸಲ್ಲಿಸಿದರು. ಅಂದೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಅರಿವು ಭಾರತ ಸಂಸ್ಥೆಯ ಮನವಿ ಅಂಗೀಕರಿಸಿ, ರಾಜ್ಯಾದ್ಯಂತ ಮುಜರಾಯಿ ದೇವಸ್ಥಾನಗಳಿಗೆ ಎಲ್ಲ ಜನಾಂಗದವರಿಗೂ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಧಾರ್ಮಿಕ ದತ್ತಿ ಇಲಾಖೆ ಮತ್ತು ಆಯಾ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದರು. ಮೊದಲನೇ ಹಂತವಾಗಿ ಕೋಲಾರ ಜಿಲ್ಲೆಯಲ್ಲಿ 2018 ಮತ್ತು 2019ನೇ ಸಾಲಿನಲ್ಲಿ ಅರಿವು ಭಾರತ ಸಂಸ್ಥೆ, ಧಾರ್ಮಿಕ ದತ್ತಿ ಇಲಾಖೆ ಮತ್ತು ಜಿಲ್ಲಾಡಳಿತ ಕೆಲ ದೇವಸ್ಥಾನಗಳಿಗೆ ಮುಕ್ತ ಪ್ರವೇಶ ಎಂಬ ಸ್ಟಿಕ್ಕರ್​ಗಳನ್ನು ಅಂಟಿಸಿದ್ದವಾದರೂ ಮುಜರಾಯಿ ಇಲಾಖೆಯ ಎಲ್ಲ ದೇವಸ್ಥಾನಗಳಿಗೆ ನಾಮಲಕ ಅಳವಡಿಸಲು ಸಾಧ್ಯವಾಗಿರಲಿಲ್ಲ. ಈಗ ಈ ಕಾರ್ಯವನ್ನು ಜಿಲ್ಲಾಡಳಿತ ಹಾಗೂ ಅರಿವು ಭಾರತ ಸಂಸ್ಥೆ ಮತ್ತೆ ಕೈಗೆತ್ತಿಕೊಂಡಿದೆ.

ಸಂಸ್ಥೆಗಳ ಸಹಕಾರ

ಜಿಲ್ಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 1300ಕ್ಕೂ ಹೆಚ್ಚು ದೇವಸ್ಥಾನಗಳಿದ್ದು, ಎಲ್ಲ ದೇವಸ್ಥಾನಗಳಲ್ಲಿ ಬೃಹತ್​ ನಾಮಲಕ ಅಳವಡಿಸಲು ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಹಾಗೂ ಅರಿವು ಭಾರತ ಸಂಸ್ಥೆಗೆ ಜಿಲ್ಲೆಯ ಸಾಹಿತಿಗಳು, ಪ್ರಗತಿಪರರು, ವಿವಿಧ ಸಂಘ&ಸಂಸ್ಥೆಗಳು ಬೆಂಬಲವ್ಯಕ್ತಪಡಿಸಿವೆ.

ಸೋಮೇಶ್ವರ ದೇಗುಲದಿಂದ ಆರಂಭ

ಅಭಿಯಾನದ ಮೊದಲ ಭಾಗವಾಗಿ ಕೋಲಾರ ನಗರದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ "ಯಾವುದೇ ಜಾತಿ, ಜನಾಂಗ, ಧರ್ಮ, ಲಿಂಗಭೇದವಿಲ್ಲದೆ ದೇವರ ದರ್ಶನಕ್ಕೆ ಸರ್ವರಿಗೂ ಮುಕ್ತ ಪ್ರವೇಶವಿರುತ್ತದೆ' ಎಂಬ ನಾಮಲಕವನ್ನು ಅಳವಡಿಸಲಾಗಿದೆ. ಅರಿವು ಭಾರತ ಸಂಸ್ಥೆಯ ಸಂಸ್ಥಾಪಕ ಅರಿವು ಶಿವಪ್ಪ, ಗಮನ ಮಹಿಳಾ ಸಂಸ್ಥೆಯ ಶಾಂತಮ್ಮ, ಕೊಂಡರಾಜನಹಳ್ಳಿ ಮಂಜುಳ, ಸಾಹಿತಿ ಸಾ.ರಘುನಾಥ್​, ಮುಜರಾಯಿ ತಹಸೀಲ್ದಾರ್​ ಶ್ರೀನಿವಾಸರೆಡ್ಡಿ ಇದ್ದರು.

ಮುಜರಾಯಿ ಇಲಾಖೆ ವ್ಯಾಪ್ತಿಯ "ಎ' ಗ್ರೇಡ್​, "ಬಿ' ಗ್ರೇಡ್​ ಮತ್ತು "ಸಿ' ಗ್ರೇಡ್​ ದೇವಸ್ಥಾನಗಳಿಗೆ ಎಲ್ಲ ಸಮುದಾಯ ಮತ್ತು ಜನಾಂಗಕ್ಕೆ ಮುಕ್ತ ಪ್ರವೇಶಕ್ಕೆ ಅವಕಾಶವಿದೆ ಎಂದು ನಾಮಲಕ ಅಳವಡಿಸುವ ಕಾರ್ಯಕ್ಕೆ ಮತ್ತೆ ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ "ಎ' ಗ್ರೇಡ್​ &6, ಬಿ ಗ್ರೇಡ್​&18, ಸಿ&ಗ್ರೇಡ್​&1300 ದೇವಸ್ಥಾನಗಳಿವೆ. ಎಲ್ಲ ದೇವಸ್ಥಾನಗಳಿಗೂ ದೀರ್ಘಕಾಲ ಬಾಳಿಕೆ ಬರುವ ನಾಮಲಕವನ್ನು ಜಿಲ್ಲಾಡಳಿತ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಸೂಚನೆ ಮೇರೆಗೆ ಅಳವಡಿಸಲಾಗುತ್ತಿದೆ.

> -ಶ್ರೀನಿವಾಸರೆಡ್ಡಿ

ಮುಜರಾಯಿ ತಹಸೀಲ್ದಾರ್​

ಅರಿವು ಭಾರತ ಸಂಸ್ಥೆಯಿಂದ ಅಸ್ಪಶ್ಯತೆ ನಿವಾರಿಸಲು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈಗಲೂ ಗ್ರಾಮೀಣ ದೇವಸ್ಥಾನಗಳ ಪ್ರವೇಶಕ್ಕೆ ಕೆಲ ಸಮುದಾಯಗಳಿಗೆ ನಿಷೇಧವಿದೆ. ಈ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಗೆ ಒಳಪಡುವ ಎಲ್ಲ ದೇವಸ್ಥಾನಗಳಿಗೆ ಎಲ್ಲರಿಗೂ ಮುಕ್ತಪ್ರವೇಶ ಸಿಗಬೇಕೆಂಬ ಕಾರಣದಿಂದ 2ನೇ ಸುತ್ತಿನಲ್ಲಿ ಅಳವಡಿಸಲಾಗುತ್ತಿದೆ. ಇದರ ಜತೆಗೆ ಗ್ರಾಮಗಳಿಗೆ ತೆರಳಿ ಸಾಮರಸ್ಯ ಮೂಡಿಸಲಾಗುತ್ತಿದೆ.

> -ಅರಿವು ಶಿವಪ್ಪ

ಅರಿವು ಭಾರತ ಸಂಸ್ಥೆ ಸಂಸ್ಥಾಪಕ