ಜಿಲ್ಲೆ

ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ವಿತರಣೆ

ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಎನ್.ಗೋವಿಂದರೆಡ್ಡಿ ಮಾಹಿತಿ | ಕೃಷಿ ಇಲಾಖೆ ನಿರ್ಲಕ್ಷ್ಯಕ್ಕೆ ಆಕ್ಷೇಪ

ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ

ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಕೃಷಿ ಇಲಾಖೆಗೆ ಸರಬರಾಜು ಮಾಡಿರುವ ಬಿತ್ತನೆ ಬೀಜಗಳನ್ನು ರೈತರಿಗೆ ಸಮರ್ಪಕವಾಗಿ ವಿತರಿಸದ ಹಿನ್ನೆಲೆಯಲ್ಲಿ ರೈತ ಸಂಘದಿಂದಲೇ ಕೃಷಿಕರಿಗೆ ಉಚಿತವಾಗಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಎನ್.ಗೋವಿಂದರೆಡ್ಡಿ ತಿಳಿಸಿದರು.

ಪಟ್ಟಣದ ಡಿವಿಜಿ ಮುಖ್ಯರಸ್ತೆಯಲ್ಲಿರುವ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿ.ಆರ್.ನಾರಾಯಣರೆಡ್ಡಿ ಬಣದಿಂದ ತಾಲೂಕಿನ 60 ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ವಿತರಿಸಿ ಮಾತನಾಡಿ, ಬರಪೀಡಿತ ಪ್ರದೇಶದ ಪಟ್ಟಿಯಲ್ಲಿರುವ ಬಾಗೇಪಲ್ಲಿ ತಾಲೂಕಿನಲ್ಲಿ ಶೇ.70 ರೈತರು ಮಳೆಯಾಶ್ರಿತ ಕೃಷಿ ಅವಲಂಬಿಸಿದ್ದಾರೆ. ಈ ಭಾಗದ ಬಡ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗುಣಮಟ್ಟದ ಬಿತ್ತನೆ ಬೀಜ ವಿತರಿಸಬೇಕೆಂದು 2 ತಿಂಗಳ ಹಿಂದೆಯೇ ರೈತ ಸಂಘದಿಂದ ಕೃಷಿ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ವಿತರಣೆ ಮಾಡಲು ತಾರತಮ್ಯ ಧೋರಣೆ ಅನುಸರಿಸಿದ್ದಾರೆ ಎಂದರು.

ಕೇಂದ್ರ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ತಾಲೂಕಿಗೆ 1,250 ಎಕರೆಗೆ ವಿವಿಧ ಮಾದರಿಯ ಬಿತ್ತನೆ ಬೀಜಗಳನ್ನು ಸರಬರಾಜು ಮಾಡಿ, ಅರ್ಹ ರೈತರಿಗೆ ಉಚಿತವಾಗಿ ವಿತರಣೆ ಮಾಡುವಂತೆ ಕೃಷಿ ಇಲಾಖೆಗೆ ಅದೇಶಿಸಿದೆ. ಬಿತ್ತನೆ ಬೀಜಗಳನ್ನು ಯಾವ ಭಾಗದ ರೈತರಿಗೆ ವಿತರಿಸಲಾಗಿದೆ ಎಂಬ ಮಾಹಿತಿ ಇಲ್ಲ. ರೈತರು ಪ್ರತಿದಿನ ಕೃಷಿ ಇಲಾಖೆ ಕಚೇರಿ ಬಳಿ ಆಗಮಿಸಿ ಬರಿಗೈಯಲ್ಲಿ ವಾಪಸಾಗುವುದನ್ನು ಕಂಡು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಮತ್ತು ತಾಲೂಕು ಘಟಕದ ವತಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಮಗ್ರ ತನಿಖೆಗೆ ಒತ್ತಾಯ

ನೆಲಗಡಲೆ, ಸಿರಿಧಾನ್ಯ ಬಿತ್ತನೆ ಬೀಜ ವಿತರಣೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ರೈತ ಸಂಘಕ್ಕೆ ಮಾಹಿತಿ ಇದ್ದು, ಅವ್ಯವಹಾರ ಕುರಿತಂತೆ ಸಮಗ್ರ ತನಿಖೆ ನಡೆಸಿ ರೈತರಿಗೆ ನ್ಯಾಯ ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಎಚ್.ಎನ್.ಗೋವಿಂದರೆಡ್ಡಿ ಹೇಳಿದರು.

ಕಾರ್ಯದರ್ಶಿ ಕೃಷ್ಣಾರೆಡ್ಡಿ, ಸದಸ್ಯರಾದ ಎನ್.ಕೃಷ್ಣಪ್ಪ, ರಾಜಪ್ಪ, ಶಂಕರ, ನಾರಾಯಣರೆಡ್ಡಿ, ಚೌಡರೆಡ್ಡಿ, ನಾರಾಯಣಸ್ವಾಮಿ ಇತರರು ಇದ್ದರು.