ಜಿಲ್ಲೆ

ಕಣ್ಣುಗಳ ಸಂರಕ್ಷಣೆ ಅತ್ಯಗತ್ಯ...

ಸ್ವಪ್ನಾ ಸುರೇಶ ಅನಿಸಿಕೆ

ರೆಡ್​ ಕ್ರಾಸ್​ನಿಂದ ಕನ್ನಡಕ ಉಚಿತ ವಿತರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ದೇಹದ ಎಲ್ಲ ಅಂಗಗಳೂ ಸಹ ಒಂದಕ್ಕೊಂದು ಪೂರಕವಾಗಿ ಪ್ರಮುಖ ಪಾತ್ರ ನಿಭಾಯಿಸುತ್ತವೆ. ಆದರೆ, ನಾವೆಲ್ಲ ಜಗತ್ತನ್ನು ಕಾಣಲು ಸಾಧ್ಯವಾಗುವ ಕಣ್ಣುಗಳು ನಮ್ಮ ದೇಹದ ಪ್ರಮುಖ ಆಸ್ತಿ. ಅವುಗಳ ಸಂರಕ್ಷಣೆ ಅತ್ಯಗತ್ಯ ಎಂದು ಲಯನ್ಸ್​ 317ರ ಜಿಲ್ಲಾ ಗವರ್ನರ್​ ಸ್ವಪ್ನಾ ಸುರೇಶ ಅನಿಸಿಕೆ ವ್ಯಕ್ತಪಡಿಸಿದರು.

ಉಡುಪಿಯ ರೆಡ್​ ಕ್ರಾಸ್​ ಶಾಖೆಯಲ್ಲಿ ಭಾರತೀಯ ರೆಡ್​ ಕ್ರಾಸ್​ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆ ಹಾಗೂ ಉಡುಪಿ ಜಿಲ್ಲಾ ಶಾಖೆ ವತಿಯಿಂದ ಉಡುಪಿ ಡಿಸ್ಟ್ರಿಕ್ಟ್​ ಕೆಮಿಸ್ಟ್​-ಡ್ರಗ್ಗಿಸ್ಟ್​ ಅಸೋಸಿಯೇಷನ್​, ನೇತ್ರ ಜ್ಯೋತಿ ಚಾರಿಟೇಬಲ್​ ಟ್ರಸ್ಟ್​ ಮತ್ತು ಪ್ರಸಾದ ನೇತ್ರಾಲಯ ಸೂಪರ್​ ಸ್ಪೆಶಾಲಿಟಿ ಆಸ್ಪತ್ರೆಯ ಆಶ್ರಯದಲ್ಲಿ ಇತ್ತೀಚೆಗೆ ನಡೆದಿದ್ದ ನೇತ್ರ ತಪಾಸಣಾ ಶಿಬಿರದಲ್ಲಿ ಆಯ್ಕೆಯಾದ ಹಲವು ಫಲಾನುಭವಿಗಳಿಗೆ ಜುಲೈ 7ರಂದು ಉಚಿತ ಕನ್ನಡಕ ವಿತರಿಸಿ ಮಾತನಾಡಿದರು.

ಜಿಲ್ಲಾ ರೆಡ್​ಕ್ರಾಸ್​ ಆಡಳಿತ ಮಂಡಳಿಯ ಸದಸ್ಯ ವಿ.ಜಿ. ಶೆಟ್ಟಿ, ಲಯನ್ಸ್​ ಮಿಡ್​ ಟೌನ್​ ಉಡುಪಿ ಅಧ್ಯಕ್ಷ ಪುರುಷೋತ್ತಮ ನಾಯಕ, ಖಜಾಂಚಿ ಸುಬ್ರಹ್ಮಣ್ಯ ಶೇರಿಗಾರ್​, ಜಿಲ್ಲಾ ಡ್ರಗ್ಗಿಸ್ಟ್​ ಅಸೋಸಿಯೇಷನ್​ನ ಕಾರ್ಯದರ್ಶಿ ಗುರುಕೃಪಾ ಉಪಸ್ಥಿತರಿದ್ದರು.

ಜಿಲ್ಲಾ ರೆಡ್​ಕ್ರಾಸ್​ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಪ್ರಾಸ್ತಾವಿಕವಾಗಿ ಮಾತಾನಾಡಿ, ಕಾರ್ಯಕ್ರಮ ನಿರೂಪಿಸಿದರು. ಖಚಾಂಚಿ ರಮಾದೇವಿ ವಂದಿಸಿದರು.

ಅಂಧತ್ವದಿಂದ ಎಷ್ಟೋ ಜನರು ಬೆಳಕನ್ನೇ ಕಂಡಿಲ್ಲ. ದೃಷ್ಟಿದೋಷದಿಂದ ಅನೇಕರು ತೊಂದರೆ ಅನುಭವಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಕಣ್ಣುಗಳ ಸಂರಕ್ಷಣೆಗೆ ರೆಡ್​ ಕ್ರಾಸ್​ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ನೇತ್ರ ಚಿಕಿತ್ಸಾ ಶಿಬಿರ ಏರ್ಪಡಿಸಿ, ದೃಷ್ಟಿ ಸಮಸ್ಯೆ ನಿವಾರಿಸಲು ಉಚಿತವಾಗಿ ಕನ್ನಡಕ ವಿತರಿಸುತ್ತಿರುವ ಸೇವಾ ಕಾರ್ಯ ಶ್ಲಾಘನೀಯ. | ಸ್ವಪ್ನಾ ಸುರೇಶ. ಲಯನ್ಸ್​ 317ರ ಜಿಲ್ಲಾ ಗವರ್ನರ್​