ಜಿಲ್ಲೆ

ಎಸ್‌ಡಿಎಂ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆ

ಸೌಮ್ಯ ಆರ್

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜ.1ರಿಂದ ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭಗೊಂಡಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಜಾರಿಗೆ ತಂದು ಲಕ್ಷಾಂತರ ಬಡವರ ಬಾಳಿಗೆ ಬೆಳಕು ನೀಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು, ಧರ್ಮಸ್ಥಳ ಲಕ್ಷ ದೀಪೋತ್ಸವದ ಸಂದರ್ಭ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಜ.1ರಿಂದ ಉಜಿರೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆ ನೀಡುವುದಾಗಿ ಘೋಷಿಸಿದ್ದರು.

ಬೆಳ್ತಂಗಡಿ ತಾಲೂಕಿನಲ್ಲಿ ಅನೇಕ ಮಂದಿ ಡಯಾಲಿಸಿಸ್ ಸೇವೆಯನ್ನು ಬೇರೆ ಬೇರೆ ಕಡೆ ಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸೀಮಿತ ಜನರಿಗೆ ಮಾತ್ರ ಅವಕಾಶ ಇರುವುದರಿಂದ, ಬೆಳ್ತಂಗಡಿ ತಾಲೂಕಿನ ಅನೇಕರು ದೂರದ ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಪರಿಸ್ಥಿತಿ ಇದೆ. ಧರ್ಮಾಧಿಕಾರಿಗಳ ಈ ಮಾನವೀಯ ಸೇವೆ ತಾಲೂಕಿನ ಅನೇಕರಿಗೆ ಅನುಕೂಲ ಕಲ್ಪಿಸಲಿದೆ. ಉಜಿರೆ ಆಸ್ಪತ್ರೆಯಲ್ಲಿ 11 ಡಯಾಲಿಸಿಸ್ ಯಂತ್ರಗಳಿದ್ದು, ವರ್ಷದಲ್ಲಿ 10 ಸಾವಿರ ಮಂದಿಗೆ ಡಯಾಲಿಸಿಸ್ ಮಾಡಬಹುದಾಗಿದೆ. ಡಯಾಲಿಸಿಸ್ ವೆಚ್ಚ ಒಬ್ಬರಿಗೆ ಒಂದು ಬಾರಿಗೆ 1,500 ರೂ. ಇದ್ದು, ಇನ್ನು ಮುಂದೆ ಉಚಿತವಾಗಿ ಸೇವೆ ಸಿಗಲಿದೆ. ತಿಂಗಳಿಗೆ ಒಬ್ಬರಿಗೆ 12ರಿಂದ 24 ಸಾವಿರ ರೂ. ವೆಚ್ಚ ಉಳಿತಾಯವಾಗಲಿದೆ. ಈ ಯೋಜನೆಗೆ ವಾರ್ಷಿಕವಾಗಿ 1.50 ಕೋಟಿ ರೂ.ಗೂ ಮಿಕ್ಕಿ ವೆಚ್ಚವಾಗುತ್ತದೆ.