ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮದ ಪೂರ್ವಸಿದ್ಧತೆ ಮತ್ತು ಆರೋಗ್ಯ ಇಲಾಖೆಯ ಇತರೆ ಕಾರ್ಯಕ್ರಮಗಳ ಕುರಿತು ಜಿಪಂ ಸಿಇಒ ಎನ್.ಹೇಮಂತ್ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಡಾ. ನಟರಾಜ್, ಡಾ. ಓ.ಮಲ್ಲಪ್ಪ, ಡಾ. ಕಿರಣ್, ಡಾ. ನಾಗೇಶ್, ಕೃಷ್ಣಪ್ಪ, ನಾಗರಾಜ್ ಇದ್ದರು.  
ಜಿಲ್ಲೆ

9ರಂದು 19 ವರ್ಷದೊಳಗಿನ ಮಕ್ಕಳಿಗೆ ಉಚಿತ ಜಂತುಹುಳು ನಿವಾರಣಾ ಮಾತ್ರೆ ವಿತರಣೆ

ಶಿವಮೊಗ್ಗ: ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನದಂದು ಜಿಲ್ಲೆಯ 1ರಿಂದ 19 ವರ್ಷದ ಎಲ್ಲ ಮಕ್ಕಳಿಗೆ ಉಚಿತವಾಗಿ ಜಂತುಹುಳು ನಿವಾರಣಾ ಮಾತ್ರೆ ನೀಡುವ ಮೂಲಕ ಶೇ.100ರಷ್ಟು ಗುರಿ ಸಾಧಿಸಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಎನ್.ಹೇಮಂತ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮದ ಪೂರ್ವಸಿದ್ಧತೆ ಮತ್ತು ಆರೋಗ್ಯ ಇಲಾಖೆಯ ಇತರೆ ಕಾರ್ಯಕ್ರಮಗಳ ಕುರಿತಾದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಮಕ್ಕಳಲ್ಲಿ ಜಂತು ಹುಳು ನಿವಾರಣೆ ಮಾಡುವುದು ಅತಿ ಅಗತ್ಯ. ಅದರಿಂದ ಮಕ್ಕಳಲ್ಲಿನ ರಕ್ತಹೀನತೆ, ಏಕಾಗ್ರತೆ ಕೊರತೆಯನ್ನು ನೀಗಿಸಿ ಕಲಿಕಾ ಸಾಮರ್ಥ್ಯ ಹೆಚ್ಚಿಸಬಹುದು ಎಂದರು.

ಅಂಗನವಾಡಿ, ಶಾಲಾ-ಕಾಲೇಜಿನಲ್ಲಿ ಹಾಜರಾತಿ ಸುಧಾರಿಸಬಹುದು. ಕೆಲಸದ ಸಾಮರ್ಥ್ಯ ಹಾಗೂ ಜೀವನೋಪಾಯದ ಅವಕಾಶವನ್ನು ವೃದ್ಧಿಸುತ್ತದೆ. ಆದ್ದರಿಂದ ಡಿ.9ರಂದು ಅಂಗನವಾಡಿ, ಶಾಲೆಗಳು, ಪಿಯು, ಐಟಿಐ, ಟೆಕ್ನಿಕಲ್ ಕೋರ್ಸ್, ನರ್ಸಿಂಗ್ ಕಾಲೇಜು, ಪ್ರಥಮ ಪದವಿ, ಮೆಡಿಕಲ್ ಕಾಲೇಜು ಮತ್ತು ಆಯುರ್ವೇದಿಕ್ ಕಾಲೇಜುಗಳಲ್ಲಿ ಉಚಿತವಾಗಿ ಜಂತುಹುಳು ನಿವಾರಣಾ ಮಾತ್ರೆಯಾದ ಆಲ್ಬೆಂಡಜೋಲ್ ಅನ್ನು ಉಚಿತವಾಗಿ ಮಕ್ಕಳಿಗೆ ನೀಡಲಾಗುವುದು ಎಂದು ಹೇಳಿದರು.

ಡಿಡಿಪಿಐ, ಎಲ್ಲ ತಾಲೂಕುಗಳ ಬಿಇಒ, ಆರೋಗ್ಯ ಅಧಿಕಾರಿಗಳು, ಸಿಡಿಪಿಒ, ಅಂಗನವಾಡಿ ಮೇಲ್ವಿಚಾರಕರು ಸಮನ್ವಯದೊಂದಿಗೆ ಎಲ್ಲ ಅಂಗನವಾಡಿ, ಶಾಲೆ, ಕಾಲೇಜುಗಳಲ್ಲಿ ಮಕ್ಕಳಿಗೆ ಮಾತ್ರೆಗಳನ್ನು ನೀಡಬೇಕು. ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ಪಾಲಕರಿಗೆ ಮೊದಲೇ ಮಾತ್ರೆ ನೀಡುವ ಬಗ್ಗೆ ಮಕ್ಕಳ ಮೂಲಕ ತಿಳಿಸಬೇಕು. ಆರೋಗ್ಯ ಇಲಾಖೆ ಸೂಚನೆಯಂತೆಯೇ ಮಾತ್ರೆಗಳನ್ನು ಮಕ್ಕಳಿಗೆ ತಮ್ಮ ಸಮ್ಮುಖದಲ್ಲೇ ನೀಡಬೇಕು ಎಂದು ಸೂಚಿಸಿದರು.

ಆರ್‌ಸಿಎಚ್ ಅಧಿಕಾರಿ ಡಾ. ಓ.ಮಲ್ಲಪ್ಪ ಮಾತನಾಡಿ, ಜಿಲ್ಲೆಯಲ್ಲಿ 4,70,316 ಮಕ್ಕಳು ನೋಂದಣಿಯಾಗಿದ್ದು, ಅಂದು ಜಿಲ್ಲಾದ್ಯಂತ ಅಂಗನವಾಡಿ ಕೇಂದ್ರ, ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಆಶಾ ಕಾರ್ಯಕರ್ತೆಯರು ಮನೆ ಭೇಟಿ ನೀಡುವ ಮೂಲಕ ಮಾತ್ರೆ ನೀಡಲಾಗುವುದು. ಅಂದು ಬಿಟ್ಟು ಹೋದ ಮಕ್ಕಳಿಗೆ ಡಿ.16ರಂದು ಮಾಪ್-ಅಪ್-ರೌಂಡ್‌ನಲ್ಲಿ ಮಾತ್ರೆ ನೀಡಿ ಶೇ.100 ಗುರಿ ಸಾಧನೆ ಮಾಡಲಾಗುವುದು ಎಂದು ತಿಳಿಸಿದರು.

ಡಿಎಚ್‌ಒ ಡಾ. ನಟರಾಜ್, ಜಿಲ್ಲಾ ಕ್ಷಯರೋಗ ನಿವಾರಣಾಧಿಕಾರಿ ಡಾ. ನಾಗೇಶ್, ಡಿಎಲ್‌ಒ ಡಾ. ಕಿರಣ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ, ಡಿಡಿಪಿಯು ನಾಗರಾಜ್ ಸೇರಿ ವಿವಿಧ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಟಿಎಚ್‌ಒಗಳು, ಇತರೆ ಅಧಿಕಾರಿಗಳು ಹಾಜರಿದ್ದರು.