ಆರ್‌ಸಿಬಿ ಗೆಲುವಿನ ಹಿನ್ನೆಲೆಯಲ್ಲಿ ವಿಜಯಪುರದ ಹೊರ ವಲಯದ ಅನ್ನಪೂರ್ಣ ಹೊಟೇಲ್‌ನಲ್ಲಿ ಉಚಿತವಾಗಿ ಅಲ್ಪೋಪಹಾರ ವಿತರಿಸಲಾಯಿತು. ವಿಜಯಜೋಶಿ, ರಾಕೇಶ ಕುಲಕರ್ಣಿ, ಮನೋಜ್ ಜಾಧವ ಮತ್ತಿತರರಿದ್ದಾರೆ. 
ಜಿಲ್ಲೆ

ಅನ್ನಪೂರ್ಣ ಹೋಟೆಲ್‌ನಲ್ಲಿ ಉಚಿತ ಅಲ್ಪೋಪಹಾರ ವಿತರಣೆ

ದತ್ತಾತ್ರೇಯ ಪಿ ಕುಲಕರ್ಣಿ

ವಿಜಯಪುರ: ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ 2025 ರ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ರಾಯಲ್ ಚಾಲೇಂಜರ್ಸ್ ತಂಡವು ಗೆಲುವು ಸಾಧಿಸಿದ ಬೆನ್ನಲ್ಲೆ ವಿಜಯಪುರದ ಆರ್‌ಸಿಬಿ ಅಭಿಮಾನಿಯೊಬ್ಬರು ತಂಡದ ಗೆಲುವನ್ನು ವಿಶೇಷವಾಗಿ ಸಂಭ್ರಮಿಸಿದರು.

ಇಲ್ಲಿನ ಬೆಂಗಳೂರು ಬೈಪಾಸ್ ರಸ್ತೆಯ ಬಳಿಯ ಅನ್ನಪೂರ್ಣ ಹೊಟೇಲ್‌ನ ಮಾಲೀಕ ಪ್ರಶಾಂತ ರಾವ್ ಅವರು, ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆರ್‌ಸಿಬಿ ವಿಜಯಶಾಲಿಯಾದ ಬೆನ್ನಲ್ಲೆ ಹೊಟೇಲ್‌ಗೆ ಆಗಮಿಸುವ ಗ್ರಾಹಕರಿಗೆ ಬುಧವಾರ ಇಡೀ ದಿನ ಉಚಿತ ತಿಂಡಿ ಮತ್ತು ಊಟ ನೀಡುವ ಮೂಲಕ ತಂಡದ ಮೇಲಿನ ತಮ್ಮ ಅಭಿಮಾನವನ್ನು ಸಾಬೀತು ಪಡಿಸಿದರು. ಹೊಟೇಲ್‌ಗೆ ಆಗಮಿಸಿದ ಸುಮಾರು 1200ಕ್ಕೂ ಅಧಿಕ ಜನರಿಗೆ ಬೆಳಗ್ಗೆ ಶಿರಾ, ಉಪ್ಪಿಟ್ಟು ಮತ್ತು ಮಧ್ಯಾಹ್ನ ಪಲಾವ್ ಹಾಗೂ ಸಾಂಬಾರ ಉಣಬಡಿಸಿದರು.

ಆರ್‌ಸಿಬಿ ತಂಡ ಫೈನಲ್‌ಗೆ ಬಂದಿದ್ದು ಹೆಚ್ಚು ಖುಷಿ ನೀಡಿತ್ತು. ತಂಡದ ಗೆಲುವಿನ ಸಂಭ್ರಮವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿ ಅನ್ನದಾನ ಮಾಡಿದೆವು. ಈ ಕುರಿತು ಫೈನಲ್ ಪಂದ್ಯಕ್ಕೂ ಮೊದಲೇ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್ ಮತ್ತು ಫೇಸ್‌ಬುಕ್‌ಗಳಲ್ಲಿ ಪೋಸ್ಟ್ ಹಾಕಲಾಗಿತ್ತು. ಸ್ನೇಹಿತರು ಸೇರಿದಂತೆ ಸಾಕಷ್ಟು ಆರ್‌ಸಿಬಿ ಅಭಿಮಾನಿಗಳು ಅದಕ್ಕೆ ಬೆಂಬಲಿಸಿ ಆರ್ಥಿಕವಾಗಿ ಸಹಾಯ ನೀಡಿದ್ದರು. ಬುಧವಾರ ಹೊಟೇಲ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಉಪಹಾರ ಮತ್ತು ಊಟ ಮಾಡಿದರು ಎಂದು ಪ್ರಶಾಂತ ರಾವ್ ತಿಳಿಸಿದರು.

ಆರ್‌ಸಿಬಿ ಮೇಲಿನ ತಮಗಿರುವ ಅಭಿಮಾನಕ್ಕೆ ಸ್ನೇಹಿತರಾದ ಪ್ರಕಾಶ ಅಕ್ಕಲಕೋಟ, ಗೋವಿಂದ ಜೋಶಿ, ಸಂತೋಷ ಕುಲಕರ್ಣಿ, ವಿಜಯ ಜೋಶಿ, ರಾಕೇಶ ಕುಲಕರ್ಣಿ, ಗುರು ಕುಲಕರ್ಣಿ, ಬಾಬು ಮಾನೆ, ದತ್ತ ಜೋಶಿ, ನಾಗು ಜೋಶಿ, ಪವನ ಜೋಶಿ, ಗುರುರಾಜ್ ರಾವ್, ವೆಂಕಟೇಶ ಜೋಶಿ, ಸಂಜು ದಿವಾನಜಿ, ಶಿವಾಜಿ ಪಾಟೀಲ, ಮನೋಜ್ ಶಾಪುರ, ವಿನೋದ ಜಾಧವ, ಹನುಮಂತ ಹಂಡಿ, ರಾಘವೇಂದ್ರ ಆನಂದಿ, ವೆಂಕಟೇಶ ಗುಡಿ, ವಾದಿರಾಜ್ ಜೋಶಿ, ಮನೋಜ್ ಜಾಧವ ಉಚಿತ ಅನ್ನದಾಸೋಹದಲ್ಲಿ ಭಾಗಿಯಾಗಿದ್ದರು.