module: NormalModule; touch: (0.2875, 0.2875); modeInfo: ; sceneMode: Auto; cct_value: 0; AI_Scene: (-1, -1); aec_lux: 84.0; 
ಜಿಲ್ಲೆ

ಕೇರಳಾಪುರ ಶಾಲೆ ಮಕ್ಕಳಿಗೆ ಬ್ಯಾಗ್ ವಿತರಣೆ

ಎ. ಆರ್. ರಘುರಾಮ

ಅರಕಲಗೂಡು: ಸರ್ಕಾರಿ ಶಾಲೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಇಳಿಕೆ ಆಗುತ್ತಿರುವುದು ಬೇಸರದ ಸಂಗತಿ ಎಂದು ಅಬಕಾರಿ ಇಲಾಖೆ ನಿವೃತ್ತ ಜಂಟಿ ಆಯುಕ್ತ ಎಚ್.ಪಿ. ಈರಪ್ಪ ಹೇಳಿದರು. ತಾಲೂಕಿನ ಕೇರಳಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಪ್ರಸನ್ನ ವೀರಭದ್ರೇಶ್ವರ ಚಾರಿಟಬಲ್ ಟ್ರಸ್ಟ್ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಕಲಿತ ಅನೇಕರು ಉನ್ನತ ಹುದ್ದೆಗೇರಿದ್ದಾರೆ. ಆದರೆ ಅನೇಕ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಹಿಂದೇಟು ಹಾಕುತ್ತಿರುವುದು ಬೇಸರಕರ. ಪಾಲಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿ ಶೈಕ್ಷಣಿಕವಾಗಿ ಸೌಲಭ್ಯಗಳನ್ನು ಒದಗಿಸಬೇಕು. ಇದರಿಂದ ಬಡ ಮಕ್ಕಳ ಕಲಿಕೆಗೆ ನೆರವಾಗಲಿದೆ ಎಂದರು.

ಕಳೆದ 18 ವರ್ಷಗಳಿಂದ ಟ್ರಸ್ಟ್ ಸಮಾಜಮುಖಿಯಾಗಿ ಹಲವು ಸೇವೆ ಮಾಡುತ್ತಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಇಂಥ ಸೇವಾ ಕಾರ್ಯಗಳಿಂದ ಮಕ್ಕಳ ದಾಖಲಾತಿ ಸಂಖ್ಯೆ ಏರಲಿ ಎಂದವರು ಆಶಿಸಿದರು.

ಪುಣ್ಯದ ಕಾಯಕ: ನಿವೃತ್ತ ಶಿಕ್ಷಕ ಬಿ.ಪಿ. ವೀರಭದ್ರಪ್ಪ ಮಾತನಾಡಿ, ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವುದು ಪುಣ್ಯದ ಕಾಯಕ ಎಂದರು. ಸರ್ಕಾರಿ ಶಾಲೆಗೆ ಬರುವ ಹಲವಾರು ಮಕ್ಕಳಿಗೆ ಅವರ ಪಾಲಕರು ಗುಣಮಟ್ಟದ ಬ್ಯಾಗ್ ಕೊಡಿಸಲೂ ಕಷ್ಟದ ಸ್ಥಿತಿ ಇದೆ. ದಾನ ಕೊಡುವ ಮನಸ್ಸು ಎಲ್ಲರಿಗೂ ಬರಲು ಸಾಧ್ಯವಿಲ್ಲ. ಟ್ರಸ್ಟ್ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ಉದಾರವಾಗಿ ಶ್ರಮಿಸಲಾಗುತ್ತಿದೆ. ಇದು ಮಾದರಿ ಎಂದರು.

ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಪರಮೇಶ, ಗ್ರಾಪಂ ಅಧ್ಯಕ್ಷೆ ಗಂಗಾಮಣಿ, ಸದಸ್ಯ ರವಿ, ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಶಕುಂತಲಾ, ಎಸ್‌ಡಿಎಂಸಿ ಅಧ್ಯಕ್ಷ

ಹೇಮಂತ್ ಕುಮಾರ್, ಸ್ವಾತಿ, ಟ್ರಸ್ಟ್ ಸದಸ್ಯರಾದ ಸುಕನ್ಯಾ, ಕೆ.ಎಸ್. ಮಹದೇವು, ಶಾಂತವೀರಪ್ಪ, ನಿವೃತ್ತ ಶಿಕ್ಷಕರಾದ ರಾಜಶೇಖರ, ಸಂಗಮೇಶ್, ಸಹ ಶಿಕ್ಷಕರಾದ ಮಂಜುನಾಥ್, ಗೀತಾ, ಮಕ್ಕಳ ಮನೆ ಶಿಕ್ಷಕಿ ಕೃಷ್ಣವೇಣಿ ಇತರರಿದ್ದರು.

ಬಾಲಕರ ಹಾಗೂ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಕ್ಕಳ ಮನೆ ಹಾಗೂ ಅಂಗನವಾಡಿ ಚಿಣ್ಣರಿಗೆ

ಉಚಿತವಾಗಿ ಶಾಲಾ ಬ್ಯಾಗ್ ವಿತರಿಸಲಾಯಿತು.