ಶಿವಮೊಗ್ಗ: ಮ್ಯಾನೇಜ್‌ಮೆಂಟ್ ಕಂಪನಿಯೊಂದರ ಹೆಸರು ದುರ್ಬಳಕೆ ಮಾಡಿಕೊಂಡು ಮಹಿಳಾ ಪೊಲೀಸ್‌ಗೆ 7.40 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದೆ.
30 ವರ್ಷದ ಮಹಿಳಾ ಪೊಲೀಸ್ ವಂಚನೆಗೆ ಒಳಗಾದವರು. ಪಾರ್ಟ್ ಟೈಮ್ ಜಾಬ್ ಎಂದು ನಂಬಿಸಿ ಹೊಟೇಲ್ ರಿವ್ಯ ಮಾಡುವಂತೆ ಟೆಲಿಗ್ರಾಂ ಆ್ಯಪ್ ಮೂಲಕ ಲಿಂಕ್ ಕಳುಹಿಸಲಾಗಿತ್ತು. ರಿವ್ಯ ಮಾಡುತ್ತಿದ್ದಂತೆ ಮಹಿಳಾ ಪೊಲೀಸ್ ಖಾತೆಗೆ 50 ರೂ. ಮತ್ತು 1000 ರೂ. ಹಣ ವರ್ಗಾಯಿಸಲಾಗಿತ್ತು. ನಂಬಿಕೆ ಮೂಡಿಸಿದ ವಂಚಕರು ಹೆಚ್ಚು ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ತಿಳಿಸಿದ್ದರು.
ಹಂತ ಹಂತವಾಗಿ 7.40 ಲಕ್ಷ ರೂ. ಹಣ ಹೂಡಿಕೆ ಮಾಡಿಸಿಕೊಂಡಿದ್ದು ತಮ್ಮ ಪಾಲಿನ ಲಾಭಾಂಶ ನೀಡುವಂತೆ ತಿಳಿಸಿದಾಗ ಹೆಚ್ಚು ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಿ ಎಂದು ವಂಚಕರು ಮೆಸೇಜ್ ಮೂಲಕ ತಿಳಿಸಿದ್ದರು. ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದರಿಂದ ಅನುಮಾನಗೊಂಡು ಪರಿಚಿತರಲ್ಲಿ ವಿಚಾರಿಸಿದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.