ಮಂಗಳೂರು: ಆನ್‌ಲೈನ್ ಮೂಲಕ ಕೇರಳ ಲಾಟರಿ ಖರೀದಿಸಿದ ವ್ಯಕ್ತಿಗೆ 12 ಲಕ್ಷ ರೂ. ಬಹುಮಾನ ಬಂದಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 1.85 ಲಕ್ಷ ರೂ. ವಂಚಿಸಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು 50 ವರ್ಷದ ದೂರುದಾರರು ಮೇ 29ರಂದು ಫೇಸ್ ಬುಕ್ ನೋಡುತ್ತಿದ್ದಾಗ ಕೇರಳ ಲಾಟರಿಯ ಜಾಹೀರಾತು ಬಂದಿದೆ. 50 ರೂ. ಟಿಕೆಟ್ ಸಂಜೆ ಡ್ರಾ ಆಗುವ ಬಗ್ಗೆ ಅದರಲ್ಲಿ ತಿಳಿಸಲಾಗಿತ್ತು. ಅದರಂತೆ ಅದರಲ್ಲಿದ್ದ ನಂಬರ್ ಗೆ ಕರೆ ಮಾಡಿದಾಗ ಸ್ವೀಕರಿಸಿದ ನವೀನ್ ಎನ್ನುವ ವ್ಯಕ್ತಿ ಲಾಟರಿ ನಂಬರ್ ಕಳುಹಿಸಿದ್ದು, ದೂರುದಾರರು ಅದರಲ್ಲಿ 2 ನಂಬರ್ ಆಯ್ಕೆ ಮಾಡಿ, ಆತ ಕಳಹಿಸಿದ ಸ್ಕ್ಯಾನರ್ ಗೆ 100 ರೂ. ಕಳಹಿಸಿದ್ದಾರೆ.
ಸಂಜೆ 4 ಗಂಟೆ ವೇಳೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಲಾಟರಿ ಡ್ರಾ ಆಗಿ 1 ನಂಬರ್ ಗೆ 12 ಲಕ್ಷ ರೂ. ಬಂದಿದೆ ಎಂದು ತಿಳಿಸಿದ್ದಾನೆ. ಬಳಿಕ ಅವರ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ನಂಬರ್, ಐಎಫ್‌ಸ್ ಸಿ ಕೋಡ್ ಇತ್ಯಾದಿಗಳನ್ನು ಕಳುಹಿಸಲು ಹೇಳಿದ್ದು, ಅದರಂತೆ ಕಳುಹಿಸಿದ್ದಾರೆ.
ಅನಂತರ 12 ಲಕ್ಷ ಹಣಕ್ಕೆ ಶೇ.1 ಹಣ ಪಾವತಿಸಬೇಕು ಎಂದು ಹೇಳಿ ದೀಪಕ್ ಹೆಸರಿನ ಗೂಗಲ್ ಪೇ ನಂಬರ್ ಕೊಟ್ಟಿದ್ದು, ದೂರುದಾರರು ಅದಕ್ಕೆ 12,000 ರೂ. ಹಾಕಿದ್ದಾರೆ. ಅನಂತರ ಆತ 24,981 ರೂ. ತೆರಿಗೆ ಕಟ್ಟಬೇಕು ಎಂದು ಹೇಳಿದ್ದು, ಮೇ.30ರಂದು ಆ ಮೊತ್ತವನ್ನೂ ಗೂಗಲ್ ಪೇ ಮಾಡಿದ್ದಾರೆ. ಅಪರಿಚಿತ ವ್ಯಕ್ತಿ ಪುನಃ 58,760 ರೂ. ಕಟ್ಟಬೇಕೆಂದು ತೆರಿಗೆ ಬಾಂಡ್ ಮತ್ತು ರಾಜ್ ಕುಮಾರ್ ಹೆಸರಿನ ಗೂಗಲ್ ಪೇ ನಂಬರ್ ಕಳುಹಿಸಿದ್ದು ಅದಕ್ಕೆ ಮತ್ತೆ ಕಟ್ಟಿದ್ದಾರೆ. ಅನಂತರ ಕೊನೆಯ ತೆರಿಗೆ ಎಂದು 89,895 ರೂ. ಮೊತ್ತದ ತೆರಿಗೆ ಪತ್ರ ಕಳುಹಿಸಿದ್ದು, ಅದನ್ನು ಪಾವತಿಸಿದರೆ 350 ರೂ. ಕಟ್ ಆಗಿ ಉಳಿದ ಮೊತ್ತ ಖಾತೆಗೆ ಜಮೆ ಆಗುತ್ತದೆ ಎಂದು ತಿಳಿಸಿದ್ದಾನೆ. ಅದರಂತೆ ಆ ಮೊತ್ತನ್ನೂ ನೆಫ್ಟ್ ಮಾಡಿದ್ದಾರೆ.
ಇದಾದ ಬಳಿಕ ತಾನು ಮೋಸ ಹೋಗಿರುವ ಬಗ್ಗೆ ಅನುಮಾನ ಬಂದು ಅಪರಿಚತ ವ್ಯಕ್ತಿಯ ಬಳಿ ಕಚೇರಿ ವಿಳಾಸ ಕೇಳಿದಾಗ ರೂಟ್ ಮ್ಯಾಪ್ ಸಹಿತ ಕಚೇರಿ ವಿಳಾಸ ಕಳುಹಿಸಿದ್ದ. ಅದರಂತೆ ತಮ್ಮ ಸ್ನೇಹಿತರ ಜತೆ ಕೇರಳದ ತಿರುವನಂತಪುರಕ್ಕೆ ಜೂ.2ರಂದು ತಲುಪಿ ಅಲ್ಲಿ ಆತನಿಗೆ ಕರೆ ಮಾಡಿದಾಗ ಈಗ ಕಚೇರಿಯಲ್ಲಿ ಇಲ್ಲ ಬರುವಾಗ ಸಂಜೆಯಾಗುತ್ತದೆ ಎಂದು ತಿಳಿಸಿದ್ದಾನೆ. ಲಾಟರಿ ಆಫೀಸಿಗೆ ತೆರಳಿ ವಿಚಾರಿಸಿದಾಗ ಇದೊಂದು ಫೇಕ್ ಲಾಟರಿ ಎಂದು ತಿಳಿದು ಬಂದಿದೆ.
ಆನ್ ಲೈನ್ ಮೂಲಕ 1,85,636 ರೂ. ವಂಚಿಸಿ ಮೋಸ ಮಾಡಿದ ಆರೋಪಿಗಳನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.