ಜಿಲ್ಲೆ

ಪೊಲೀಸ್ ಅಧಿಕಾರಿ ಹೆಸರಿನಲ್ಲಿ ವಂಚನೆ

* ಸೈಬರ್ ವಂಚಕರ ಜಾಲಕ್ಕೆ ಬೀಳುವವರೇ ಹೆಚ್ಚು

* ಅಂಗವಿಕಲ ಮಹಿಳೆಗೆ 13 ಲಕ್ಷ ರೂ. ಮೋಸ

ರಾಮನಗರ

ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣಗಳು ಸೇರಿ ವಿವಿಧ ರೀತಿಯಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದ ಹೊರತಾಗಿಯೂ ಸೈಬರ್ ವಂಚಕರ ಜಾಲಕ್ಕೆ ಬೀಳುವವರ ಸಂಖ್ಯೆ ಕಡಿಮೆ ಆಗಿಲ್ಲ.

ಪೊಲೀಸ್ ಅಧಿಕಾರಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಮಾಡಿ 13 ಲಕ್ಷ ರೂ. ಗಳನ್ನು ಅಂಗವಿಕಲ ಮಹಿಳೆಯೊಬ್ಬರಿಂದ ಕಸಿದುಕೊಂಡ ಪ್ರಕರಣ ರಾಮನಗರ ಸಿಇಎನ್ ಠಾಣೆಯಲ್ಲಿ ದಾಖಲಾಗಿರುವುದೇ ಇದಕ್ಕೆ ಸಾಕ್ಷಿ.

ನಗರದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ನೌಕರೆಯಾಗಿರುವ ಮಹಿಳೆಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಟೆಲಿಕಾಂ ಇಲಾಖೆಯಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ, ನಿಮ್ಮ ಮೊಬೈಲ್ ಸಂಖ್ಯೆಯನ್ನು ಬ್ಲ್ಯಾಕ್ ಮಾಡುತ್ತಿರುವುದಾಗಿ ಹೇಳಿದ್ದಾನೆ. ಮಹಿಳೆ ಕಾರಣ ಕೇಳಿದಾಗ, ಮನಿಲಾಂಡರಿಂಗ್ ಪ್ರಕರಣದಲ್ಲಿ ನೀವು ಭಾಗಿಯಾಗಿದ್ದೀರಿ ಎಂದು ಹೆದರಿಸಿದ್ದಾನೆ. ಈ ವಿಚಾರವಾಗಿ ದೆಹಲಿ ಪೊಲೀಸರು ನಿಮಗೆ ಕರೆ ಮಾಡುತ್ತಾರೆ ಎಂದು ಹೇಳಿ ಸಂಪರ್ಕ ಕಡಿತ ಮಾಡಿದ್ದಾನೆ.

ನಂತರ ವಾಟ್ಸ್ ಆ್ಯಪ್ ವಿಡಿಯೋ ಕಾಲ್ ಮಾಡಿದ ವ್ಯಕ್ತಿ ದೆಹಲಿ ಪೊಲೀಸ್ ಎಸಿಪಿ ಎಂದು ಪರಿಚಯ ಮಾಡಿಕೊಂಡು, ನರೇಶ್ ಗೋಯಲ್ ಎನ್ನುವ ವ್ಯಕ್ತಿ ಮೇಲೆ 11 ಕೋಟಿ ರೂ. ಮನಿಲಾಂಡರಿಂಗ್ ಪ್ರಕರಣ ದಾಖಲಾಗಿದೆ. ಇದರಲ್ಲಿ 244 ಮಂದಿ ಅನುಮಾನಾಸ್ಪದ ವ್ಯಕ್ತಿಗಳಿದ್ದು, ಇದರಲ್ಲಿ ನೀವು ಇದ್ದೀರಿ ಎಂದು ಹೇಳಿ ಹೆದರಿಸಿದ್ದಾನೆ. ಈ ವೇಳೆ ತಾನು ಅಂಗವಿಕಲೆಯಾಗಿದ್ದು, ಕರ್ನಾಟಕ ಬಿಟ್ಟು ಎಲ್ಲಿಗೂ ಬಂದಿಲ್ಲ ಎಂದರೂ ನಿಮ್ಮ ಮೇಲೆ ಸಿಬಿಐ ಕೇಸ್ ಆಗುತ್ತದೆ ಎಂದು ಹೆದರಿಸಿ ಸಂಪರ್ಕ ಕಡಿತಗೊಳಿಸಿದ್ದಾನೆ.

ಇದಾದ ಕೆಲ ಹೊತ್ತಿಗೆ ರಾಹುಲ್ ಗುಪ್ತಾ ಎನ್ನುವ ವ್ಯಕ್ತಿ ಕರೆ ಮಾಡಿ, ನಾನು ಸಿಬಿಐ ಅಧಿಕಾರಿಯಾಗಿದ್ದು, ನಿಮ್ಮನ್ನು ಬಂಧಿಸಲು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿಲ್ಲ ಎಂದು ಮತ್ತೆ ಹೆದರಿಸಿದ್ದಾನೆ. ಈ ವೇಳೆ ಮಹಿಳೆ ಗಾಬರಿಯಿಂದ ತಾನೇನು ಮಾಡಬೇಕು ಎಂದು ಕೇಳಿದಾಗ, ನಿಮ್ಮನ್ನು ಸಂಪರ್ಕ ಮಾಡಿರುವ ಬಗ್ಗೆ ಯಾರಿಗೂ ಹೇಳಬೇಡಿ. ಪ್ರತಿ ಅರ್ಧಗಂಟೆಗೆ ಒಮ್ಮೆ ನಮಗೆ ಎಸ್‌ಎಂಎಸ್ ಮೂಲಕ ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ನೀಡಿ ಎಂದೆಲ್ಲ ನಂಬಿಸಿದ್ದಾರೆ.

ನಂತರ ಕರೆ ಮಾಡಿ, ಕೋರ್ಟ್‌ಗೆ ಪಿಟಿಷನ್ ಹಾಕಬೇಕು, ನಾವು ಹೇಳಿದಂತೆ ಬರೆಯಿರಿ, ಅಲ್ಲದೆ, ನ್ಯಾಯಾಲಯದ ಆದೇಶ ಆಗಿರುವ ಕಾರಣ ನಿಮ್ಮ ಖಾತೆಯನ್ನು ಪರಿಶೀಲನೆ ಮಾಡಬೇಕು. ನಿಮ್ಮ ಖಾತೆಯಲ್ಲಿರುವ ಹಣ ಹಾಕಿ ಎಂದು ಹೇಳಿ, ಕೋರ್ಟ್ ಪಿಟಿಷನ್, ಜಾಮೀನು ಅರ್ಜಿ ಎಂದು ಹೇಳಿಕೊಂಡು ಹಂತ ಹಂತವಾಗಿ ಇವರಿಂದ ಒಟ್ಟು 12,09,997 ರೂ.ಗಳನ್ನು ಆನ್ ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಈ ಸಂಬಂಧ ನೊಂದ ಮಹಿಳೆ ರಾಮನಗರ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ಸಾಲಕ್ಕಾಗಿ ಹಣ ಹೋಯ್ತು

ಮುದ್ರಾ ಯೋಜನೆಯಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ 80 ಸಾವಿರ ರೂ. ವಂಚಿಸಿರುವ ಪ್ರಕರಣ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ. ರಾಮನಗರದ ಟ್ರೂಪ್ ಲಾಯದ ನಿವಾಸಿ ನಂದೀಶ್ ಹಣ ಕಳೆದುಕೊಂಡವರು. ಸಬ್ಸಿಡಿಯಲ್ಲಿ ಮುದ್ರಾ ಯೋಜನೆಯಡಿ 5 ಲಕ್ಷ ರೂ. ಲೋನ್ ದೊರೆಯಲಿದೆ ಎನ್ನುವ ಸಂದೇಶ ಇವರ ಮೊಬೈಲ್‌ಗೆ ಬಂದಿದೆ. ಇದರಲ್ಲಿದ್ದ ನಂಬರ್‌ಗೆ ಕರೆ ಮಾಡಿದಾಗ, ತಾನು ಪ್ರಧಾನ ಮಂತ್ರಿ ಜನ್‌ಧನ್ ಯೋಜನೆಯ ಸಬ್ಸಿಡಿ ವಿಭಾಗದ ಸಿಬ್ಬಂದಿ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿ ಸಾಲ ಮಂಜೂರು ಮಾಡಲು ದಾಖಲೆಗಳನ್ನು ಪರೀಶೀಲನೆ ಮಾಡಬೇಕು ಎಂದು ಹೇಳಿ ನಂದೀಶ್ ದಾಖಲೆಗಳನ್ನು ಪಡೆದುಕೊಂಡಿದ್ದಾನೆ.

ನಂತರ ಸಾಲ ಮಂಜೂರಾತಿಗೆ ಜಿಎಸ್‌ಟಿ, ಪ್ರೊಸೆಸಿಂಗ್ ಫೀ ಎಂದು ಹೇಳಿಕೊಂಡು ಹಂತ ಹಂತವಾಗಿ 79,386 ರೂ.ಗಳನ್ನು ಆನ್‌ಲೈನ್ ಮೂಲಕ ಪಾವತಿಸಿಕೊಂಡಿದ್ದಾನೆ. ಆದರೆ, ನಂದೀಶ್ ಅವರಿಗೆ ಯಾವುದೇ ಸಾಲ ಬರಲೇ ಇಲ್ಲ. ಈ ಹಿನ್ನೆಲೆಯಲ್ಲಿ ಹಣ ಕಳೆದುಕೊಂಡಿರುವುದು ಗೊತ್ತಾದ ನಂತರ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.