ಜಿಲ್ಲೆ

ಖಾತೆ ಮಾಡಿಸಿ ಕೊಡುವುದಾಗಿ 1.52 ಲಕ್ಷ ರೂ. ಧೋಖಾ ಪೌರಾಯುಕ್ತ ಮಹದೇವ್ ಅವರಿಂದ ನಗರ ಠಾಣೆಗೆ ದೂರು

ಕನಕಪುರ

ನಗರಸಭೆ ಅಧಿಕಾರಿ ಆಪ್ತ ಸಹಾಯಕ(ಪಿಎ) ಎಂದು ಹೇಳಿ ಕುಟುಂಬವೊಂದನ್ನು ನಂಬಿಸಿ ಖಾತೆ ಮಾಡಿಸಿಕೊಡುವುದಾಗಿ ಹೇಳಿ ವ್ಯಕ್ತಿಯೊಬ್ಬ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.


ನಗರದ ಬೂದಿಕೆರೆ ವಾಸಿ ಶಿವಪ್ರಸಾದ್ ಕುಟುಂಬ ಮೋಸ ಹೋದವರು. ಏರಂದ್ಯಾಪನಹಳ್ಳಿ ಹರೀಶ್ ಕುಮಾರ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ನಗರಸಭೆ ಪೌರಾಯುಕ್ತರ ಪಿಎ ಎಂದು ಹೇಳಿ ಪೌತಿ ಖಾತೆ ಮಾಡಿಸಿಕೊಡುವುದಾಗಿ ನಂಬಿಸಿ ಅವರಿಂದ 1.52 ಲಕ್ಷ ರೂ. ಪಡೆದಿದ್ದಾನೆ. ಶಿವಪ್ರಸಾದ್ ನಗರಸಭೆಗೆ ಬಂದು ವಿಚಾರಿಸಿದಾಗ ಮೋಸ ಹೋಗಿರುವುದು ಬಯಲಾಗಿದೆ.

ನಡೆದಿದ್ದೇನು?


ನಗರಸಭೆ ಮಾಜಿ ಸದಸ್ಯ ಲೇಟ್ ಗುರುಲಿಂಗಮೂರ್ತಿ ಅವರ ಸೋದರ ಶಿವಪ್ರಸಾದ್ ಹಾಗೂ ಕುಟುಂಬದ ಸದಸ್ಯರು ಬೆಂಗಳೂರಿನ ಬನಶಂಕರಿಯಲ್ಲಿ ವಾಸವಾಗಿದ್ದಾರೆ. ಬೂದಿಕೆರೆಯ ಕೃಷ್ಣ ಕಲ್ಯಾಣ ಮಂಟಪದ ಬಳಿ ಇರುವ ಆಸ್ತಿಯ ಬಗ್ಗೆ ಅಣ್ಣ - ತಮ್ಮಂದಿರ ಭಾಗಾಂಶದ ಪೌತಿ ಖಾತೆ ಮಾಡಿಸಲು ನಗರಭೆಗೆ ಅರ್ಜಿ ಸಲ್ಲಿಸಿದ್ದರು. ಈ ಕುಟುಂಬ ಸದಸ್ಯರ ಸಮಸ್ಯೆ ಅರಿತ ಹರೀಶ್ ಮತ್ತಿತರರು ನಗರಸಭೆ ಎದುರು ಇವರನ್ನು ಹಿಂಬಾಲಿಸಿ ನಗರಸಭೆ ಅಧಿಕಾರಿಯ ಆಪ್ತ ಸಹಾಯಕರೆಂದು ಹೇಳಿ ನಂಬಿಸಿದ್ದಾರೆ. ನಿಮ್ಮ ಕೆಲಸ ಸಲೀಸಾಗಿ ಆಗಬೇಕೆಂದರೆ ಹಣ ನೀಡಬೇಕೆಂದು ನಂಬಿಸಿ ಸೋಮವಾರ ಮಧ್ಯಾಹ್ನ ಹಣ ಪಡೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಸ್ನೇಹಿತನ ಮೊಬೈಲ್‌ಗೆ ಕರೆ ಮಾಡಿ, ನಗರಸಭೆ ಅಧಿಕಾರಿ ನಿಮ್ಮ ಜತೆ ಮಾತನಾಡುತ್ತಾರೆ ಎಂದು ಹೇಳಿ ಆತನ ಜತೆಗೆ ಮಾತನಾಡಿಸಿದ್ದಾನೆ. ನಾಳೆ ನೀವು ಕಚೇರಿಗೆ ಬನ್ನಿ ಕೆಲಸ ಆಗುತ್ತದೆ ತಿಳಿಸಿದ್ದಾನೆ. ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಬನಶಂಕರಿಯಿಂದ ಪತ್ನಿ ಮಕ್ಕಳೊಂದಿಗೆ ಬಂದ ಶಿವಪ್ರಸಾದ್, ನಗರಸಭೆ ಪೌರಾಯುಕ್ತ ಎಂ.ಎಸ್.ಮಹದೇವ್ ಅವರ ಕಚೇರಿಗೆ ಬಂದು ಕೆಲಸ ಮಾಡಿಕೊಡುವಂತೆ ಕೇಳಿದ್ದಾರೆ.

ವಿಷಯವೇ ಗೊತ್ತಿಲ್ಲದ ಪೌರಾಯುಕ್ತರು, ಅವರು ಹೇಳಿದ ದೂರವಾಣಿಗೆ ಕರೆ ಮಾಡಿ ಮಾತನಾಡಿ. ಆತನಿಗೆ ಎಚ್ಚರಿಕೆ ನೀಡಿದ್ದಲ್ಲದೆ, 3 ಗಂಟೆಯೊಳಗೆ ನಗರಸಭೆ ಕಚೇರಿಗೆ ಬಂದು ಹಣ ನೀಡಲು ಸೂಚಿಸಿದ್ದು, ವಂಚನೆ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ನಂತರ ದೂರವಾಣಿ ಕರೆ ಮಾಡಿದ ವ್ಯಕ್ತಿಯ ನಂಬರ್ ಪತ್ತೆ ಹಚ್ಚಿ ಕರೆಸಿ ಕೇಳಿದಾಗ ನಾನು ತಾಲೂಕು ಕಚೇರಿ ಮುಂದೆ ನಿಂತಿದ್ದ ವೇಳೆ ರೇಷನ್ ಕಾರ್ಡ್‌ಗೆ ಎಸ್‌ಎಂಎಸ್ ಕಳುಹಿಸಬೇಕೆಂದು ವ್ಯಕ್ತಿಯೊಬ್ಬ ಮೊಬೈಲ್ ಪಡೆದು ಪರಾರಿಯಾಗಿದ್ದಾನೆ. ವಂಚನೆ ಬಗ್ಗೆಯೂ ಮಾಹಿತಿ ಇಲ್ಲ ಎಂದು ದೃಢಪಡಿಸಿದ್ದಾನೆ.

ಪೌರಾಯುಕ್ತರಿಂದ ದೂರು


ನಗರಸಭೆ ಪೌರಾಯುಕ್ತ ಎಂಎಸ್.ಮಹದೇವ್ ನಗರ ಠಾಣೆಯಲ್ಲಿ ವಂಚಕರ ಬಗ್ಗೆ ಪೋಟೋ ಸಮೇತ ದೂರು ನೀಡಿದ್ದಾರೆ. ನಗರಸಭೆ ಸರ್ಕಲ್‌ನಲ್ಲಿರುವ ಸಿಸಿ ಕ್ಯಾಮರಾದಲ್ಲಿ ವಂಚಕರ ಚಲನವಲನಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ದಲ್ಲಾಳಿಗಳ ಸಖ್ಯ ಬೇಡ


ಈ ರೀತಿ ವಂಚನೆ ಮಾಡುವವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಈಗಾಗಲೇ ನಗರ ಠಾಣೆಗೆ ದೂರು ನೀಡಲಾಗಿದೆ. ಕಚೇರಿಯ ಎದುರು ಇರುವ ಸಿಸಿ ಕ್ಯಾಮರಾದಲ್ಲಿ ಹಣ ವಸೂಲಿ ಮಾಡುತ್ತಿರುವ ದೃಶ್ಯ ಸೆರೆ ಸಿಕ್ಕಿದೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲಾಗುವುದು ಎಂದು ಪೌರಾಯುಕ್ತ ಮಹದೇವ್ ಪ್ರತಿಕೆಗೆ ತಿಳಿಸಿದ್ದಾರೆ. ನಗರಸಭೆಯ ಕಚೇರಿಗಳಿಗೆ ಕೆಲಸ ಕಾರ್ಯಗಳಿಗೆ ಬರುವವರು ನೇರವಾಗಿ ಕಚೇರಿಗೆ ಬಂದು ಕೆಲಸ ಮಾಡಿಕೊಳ್ಳಬೇಕು. ಅಪರಿಚಿತ ವ್ಯಕ್ತಿಗಳು ನಂಬಿಸಲು ಬಂದಾಗ ಕಚೇರಿಗಾಗಲೀ ಅಥವಾ ಪೊಲೀಸರಿಗಾಗಲಿ ದೂರು ನೀಡುವುದು ಸೂಕ್ತ ಎಂದರು.