ಕೋಲಾರ: ದಿವಾಳಿಯತ್ತ ಮುಖ ಮಾಡಿರುವ ಡಿಸಿಸಿ ಬ್ಯಾಂಕಿನಲ್ಲಿ ಗ್ರಾಹಕರನ್ನು ವಂಚಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕೆ.ಸರೋಜಮ್ಮ ಮತ್ತು ದಿ.ಬಿ.ಎಸ್. ನಾರಾಯಣಸ್ವಾಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಖಾತೆದಾರ ಬಗಲಹಳ್ಳಿ ಸುರೇಶ್ ಬಾಬು ಆರೋಪಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ಕಾಲದಲ್ಲಿ ರೈತರ ಜೀವ ಆಗಿದ್ದ ಡಿಸಿಸಿ ಬ್ಯಾಂಕ್, ಅಧಿಕಾರಿಗಳು ಮಾಡುವ ಎಡವಟ್ಟಿನಿಂದ ನಂಬಿಕೆ ಕಳೆದುಕೊಳ್ಳುತ್ತಿದೆ. ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆ ಎಂದು ದೂರಿದರು.
"ಗ್ರೀನ್ ಹೌಸ್ ನಿರ್ಮಾಣಕ್ಕೆ ಸಾಲ ಮಂಜೂರಿಗಾಗಿ ಬ್ಯಾಂಕಿಗೆ ಅರ್ಜಿ ಸಲ್ಲಿಸಿದ್ದೆ, ನನ್ನ ಅರ್ಹತೆಯನ್ನು ಪರಿಗಣಿಸಿದ ಅಧಿಕಾರಿಗಳು 10 ಲಕ್ಷ ರೂ. ಸಾಲ ಮಂಜೂರು ಮಾಡಿದ್ದಾರೆ. ನನ್ನ ಚೆಕ್ಅನ್ನು ಕದ್ದು ಸಹಿಯನ್ನೂ ಮಾಡಿಕೊಂಡು ನನ್ನ ಗಮನಕ್ಕೂ ತರದೆ ಸಂಪೂರ್ಣ ಹಣ ಡ್ರಾ ಮಾಡಿಕೊಂಡು ಮೋಸ ಮಾಡಿದ್ದಾರೆ' ಎಂದರು.
ಗ್ರಾಹಕನ ಖಾತೆಯಿಂದ 1 ಲಕ್ಷ ರೂ.ಗೂ ಹೆಚ್ಚು ಹಣ ಡ್ರಾ ಮಾಡಬೇಕಾದ ಬ್ಯಾಂಕಿನ ಸಿಬ್ಬಂದಿ, ಖಾತೆದಾರನ ಗಮನಕ್ಕೆ ತರಬೇಕು. ಆದರೆ ತಂದಿಲ್ಲ. ಇದಕ್ಕೆ ಕಾರಣರಾದವರ ವಿರುದ್ಧ್ಧ ದೂರು ನೀಡಲಾಗಿದೆ.
ಇನ್ನು ಮುಂದೆ ಬ್ಯಾಂಕಿನಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು. ಬ್ಯಾಂಕ್ ಖಾತೆಗಳಿಗೂ ನಾನು ಕನ್ನಡದಲ್ಲಿಯೇ ಸಹಿ ಮಾಡಿದ್ದೇನೆ, ಆದರೆ ಆರೋಪಿಗಳು ಇಂಗ್ಲಿಷ್ನಲ್ಲಿ ಮಾಡಿದ್ದಾರೆ. ಇದು ನನ್ನದಲ್ಲ. ಡ್ರಾ ಮಾಡಿರುವ ಹಣ ವಾಪಸ್ ಮಾಡುವಂತೆ 8 ತಿಂಗಳಿಂದ ಕೇಳಿಕೊಂಡು ಬಂದರೂ, ಸತಾಯಿಸಿಕೊಂಡು ಬಂದಿರುವುದಲ್ಲದೆ ಗಣ್ಯರ ಸಮ್ಮುಖದಲ್ಲಿ ರಾಜೀ ಪಂಚಾಯಿತಿ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು. ಈ ಸಂಬಂಧ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಗೂ ದೂರು ನೀಡಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದರು.