ವಿಜಯಪುರ: ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಸುತ್ತಿರುವ ಪ್ರಕರಣಗಳಿಂದಾಗಿ ಭಯ ಮತ್ತು ಆತಂಕಕ್ಕೆ ಒಳಗಾಗಿರುವ ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ವಂಚಕರ ಜನ್ಮ ಜಾಲಾಡುವ ಮೂಲಕ ಅಭಯ ನೀಡುವ ಪ್ರಯತ್ನ ನಡೆಸಿದೆ.
ಜಿಲ್ಲಾದ್ಯಂತ ಹೆಚ್ಚುತ್ತಿರುವ ಭೂಮಿ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ‘ವಿಜಯವಾಣಿ’ ನಿರಂತರ ವರದಿ ಮೂಲಕ ಸಾರ್ವಜನಿಕರನ್ನು, ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಮತ್ತು ಪೊಲೀಸ್ ಇಲಾಖೆಯನ್ನು ಎಚ್ಚರಿಸುವ ಪ್ರಯತ್ನ ಮಾಡಿದ ಫಲ ಒಂದೊಂದೇ ಹಗರಣಗಳಲ್ಲಿ ವಂಚಕರನ್ನು ಹೆಡೆಮುರಿ ಕಟ್ಟಿ ತರಲಾಗುತ್ತಿದೆ.
ಇನ್ನೊಂದೆಡೆ ಭ್ರಷ್ಟಕೂಪವಾಗಿರುವ ಉಪ ನೋಂದಣಿ ಇಲಾಖೆ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ಸಹ ಎಚ್ಚೆತ್ತುಕೊಂಡಿದ್ದು, ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಪ್ರಕ್ರಿಯೆಗೆ ಮುನ್ನುಡಿ ಬರೆದಿದ್ದಾರೆ. ಪರಿಣಾಮ ಹಲವು ಪ್ರಕರಣಗಳನ್ನು ಪತ್ತೆ ಹೆಚ್ಚಿ ಪೊಲೀಸ್ ಠಾಣೆಗೆ ದೂರು ನೀಡಲಾಗುತ್ತಿದೆ. ದೂರು ದಾಖಲಿಸಿಕೊಂಡ ಪೊಲೀಸರು ವಂಚಕರ ಜನ್ಮ ಜಾಲಾಡುತ್ತಿದ್ದಾರೆ. ಆದರೆ, ದೊಡ್ಡ ದೊಡ್ಡ ಕುಳಗಳು ಗಾಳಕ್ಕೆ ಸಿಗದಿರುವ ಬಗ್ಗೆ ಇನ್ನೂ ಚರ್ಚೆಯಾಗುತ್ತಲೇ ಇದೆ. ಇನ್ನೊಂದೆಡೆ ರಾಜಿ-ಸಂಧಾನದ ಮೂಲಕ ಪೊಲೀಸ್ ಠಾಣೆಯ ಹೊರಗೇ ಪ್ರಕರಣಗಳನ್ನು ಮುಚ್ಚಿಹಾಕುವ ಯತ್ನದಲ್ಲಿ ವಂಚಕರು, ಪ್ರಭಾವಿಗಳಿದ್ದಿರುವುದು ಕಂಡು ಬಂದಿದೆ.
ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪತ್ಯೇಕ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿರುವ ಪೊಲೀಸರು ಅವರಿಂದ ಹಣ ಜಫ್ತು ಮಾಡಿಕೊಂಡಿದ್ದಾರೆ.
ನಗರದ ಕೆಎಚ್‌ಬಿ ಕಾಲನಿಯ ನಿವಾಸಿ ಅನೀಲ ಇವರ ತಂದೆ ನಾರಾಯಣ ಶಿವರಾಮ ಸಾಠೆ ಹಾಗೂ ಅನೀಲ ನಂದಪ್ಪ ಮೋಗಲಿ ಇವರ ಜಂಟಿ ಮಾಲಿಕತ್ವದಲ್ಲಿರುವ ಭೂತನಾಳ ಗ್ರಾಮದ ರಿಸನಂ.144/2ರ 6.15 ಎಕರೆ ಜಮೀನನ್ನು ಇಸಾಕ ಮೂಸಾ ನಿಪ್ಪಾಣಿ ಇವರಿಗೆ ಮೋಸತನದಿಂದ ಮಾರಾಟ ಮಾಡಿ 20 ಲಕ್ಷ ರೂಪಾಯಿ ವಂಚಿಸಿದ್ದರು. ಈ ಬಗ್ಗೆ ಆದರ್ಶ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಠಪತಿ ಗಲ್ಲಿಯ ಬಾಪು ದೊಂಡಿಬಾ ಕ್ಷೀರಸಾಗರ, ಧನಲಕ್ಷ್ಮಿ ನಗರದ ಪ್ರಕಾಶ ಸುಖದೇವ ಐವಳ್ಳಿ, ದ್ಯಾಬೇರಿಯ ದಾದಾ ವಿಲಾಸ ಐಹೊಳ್ಳಿ, ಮಿನಿ ಮಾದರ ಓಣಿಯ ಗಣೇಶ ದೇವೇಂದ್ರ ದೇವಕುಳೆ, ಮಹಾರಾಷ್ಟ್ರದ ಯೋಗೇಶ ಚಂದ್ರಕಾಂತ ಕಾಂಬಳೆ ಹಾಗೂ ಭಾರತ ಸತ್ಯಪ್ಪ ಕಾಂಬಳೆ ಎಂಬುವರನ್ನು ಬಂಧಿಸಿ 3.50 ಲಕ್ಷ ರೂಪಾಯಿ ಜಫ್ತು ಮಾಡಲಾಗಿದೆ. ನಕಲಿ ಆಧಾರ್ ಸೃಷ್ಠಿಸಿದ ಆರೋಪಿ ಸೇರಿದಂತೆ ಇನ್ನಿತರ ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಎಸ್‌ಪಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲಿ ಮಾರುತಿ ರಾಜಾರಾಮ ನಾರಾಯಣಕರ ಇವರಿಗೆ ಕೆಲವರು ಮೋಸ ಮಾಡಿದ್ದರು. ತಿಕೋಟಾ ತಾಲೂಕಿನ ತೊರವಿ ಗ್ರಾಮದ ರಿಸನಂ. 344/1ಬ/1ರ 1.36 ಎಕರೆ ಜಮೀನು ಖೊಟ್ಟಿ ದಾಖಲೆ ಸೃಷ್ಠಿಸಿ 25 ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗಿತ್ತು. ಮೋಸಕ್ಕೆ ಒಳಗಾದ ಮಾರುತಿ ಅವರು ಮರಳಿ ಹಣ ಕೇಳಲಾಗಿ ಹೆದರಿಸಿ ಜೀವ ಬೆದರಿಕೆ ಹಾಕಿದ್ದಾರೆಂದು ಆದರ್ಶ ನಗರ ಠಾಣೆಗೆ ದೂರು ನೀಡಲಾಗಿತ್ತು. ಬಳಿಕ ಪ್ರಕರಣವನ್ನು ಸಿಇಎನ್ ಠಾಣೆಗೆ ವರ್ಗಾಯಿಸಲಾಗಿದ್ದು, ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಅರಕೇರಿಯ ಸುಭಾಸ ಬಾಬಶ ಸುಳ್ಳು ಊರ್ಫ್ ಮಾನೆ ಬಂಧಿತ ಆರೋಪಿಯಾಗಿದ್ದು, ಈತನಿಂದ 21 ಲಕ್ಷ ರೂ. ಜಫ್ತು ಮಾಡಲಾಗಿದೆ ಎಂದು ಎಸ್‌ಪಿ ಸೋನಾವಣೆ ತಿಳಿಸಿದ್ದಾರೆ.
ಎಎಸ್‌ಪಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಸಿಪಿಐ ರಮೇಶ ಅವಜಿ, ಪಿಎಸ್‌ಐ ಮಲ್ಲಿಕಾರ್ಜುನ ತಳವಾರ, ಪಿಎಸ್‌ಐ ದೀಪಾ ಗೋಡೇಕರ, ಸಿಬ್ಬಂದಿ ಎಂ.ಎಂ. ಕುರುವಿನಶೆಟ್ಟಿ, ಸಿದ್ದು ದಾನಪ್ಪಗೋಳ, ಆರ್.ಬಿ. ಕೋಳಿ, ಎಚ್.ಎನ್. ಬಾಗವಾನ, ಆರ್.ಐ. ಲೋಣಿ, ಎಸ್.ಆರ್.ಬಡಚಿ, ಎ.ಆರ್. ಗದ್ಯಾಳ, ಎಸ್.ಎಸ್. ಕೆಂಪೆಗೌಡ, ಎಸ್.ಆರ್. ಉಮನಾಬಾದಿ, ಎಂ.ಬಿ. ಹೂಗಾರ, ಪುಂಡಲೀಕ ಎಸ್. ಬಿರಾದಾರ, ಡಿ.ಆರ್. ಪಾಟೀಲ ಹಾಗೂ ಎಂ.ಕೆ. ಹಾಡಿ ಇವರ ಯಶಸ್ವಿ ಕಾರ್ಯಾಚರಣೆ ಶ್ಲಾಘನೀಯ ಎಂದು ಎಸ್‌ಪಿ ಋಷಿಕೇಶ ಕೊಂಡಾಡಿದ್ದಾರೆ.