ಜಿಲ್ಲೆ

ಉದ್ಯೋಗ ಆಮಿಷದಲ್ಲಿ 7 ಲ.ರೂ. ವಂಚನೆ : ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅರೆಸ್ಟ್

ಸೌಮ್ಯ ಆರ್

ಕಾಸರಗೋಡು: ಹಡಗು ಕಂಪನಿಯಲ್ಲಿ ಉದ್ಯೋಗ ದೊರಕಿಸಿಕೊಡುವ ಭರವಸೆಯೊಂದಿಗೆ ಕೊಲ್ಲಂ ಪಾರುಂಬ ನಿವಾಸಿಯೊಬ್ಬರಿಂದ 7 ಲಕ್ಷ ರೂ. ಪಡೆದು ವಂಚಿಸಿದ ಪೆರ್ಲ ಸನಿಹದ ಎಣ್ಮಕಜೆ ನಿವಾಸಿ ಅಹಮ್ಮದ್ ಅಸ್‌ಬಾಕ್‌ನನ್ನು ಮಂಗಳೂರು ವಿಮಾನ ನಿಲ್ದಾಣದಿಂದ ಕೊಲ್ಲಂ ನೂರುನಾಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮರ್ಚಂಟ್ ನೇವಿ ಕೋರ್ಸ್ ಮುಗಿಸಿ ಉದ್ಯೋಗ ಇದಿರು ನೋಡುತ್ತಿದ್ದ ಯುವಕನನ್ನು ಸಂಪರ್ಕಿಸಿ ಬೆಂಗಳೂರು ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿರುವ ರಿಕ್ರೂಟ್‌ಮೆಂಟ್ ಸಂಸ್ಥೆಯಿಂದ ತುರ್ಕಿಯ ಹಡಗು ಕಂಪನಿಗೆ 2023ರಲ್ಲಿ ಉದ್ಯೋಗಕ್ಕಾಗಿ ಅಹಮ್ಮದ್ ಅಸ್‌ಬಾಕ್ ಇಂಟರ್‌ವ್ಯೆ ನಡೆಸಿದ್ದನು. ಅಲ್ಲದೆ ನೇಮಕಾತಿ ಹೆಸರಲ್ಲಿ ಎಸ್‌ಬಿಐ ಖಾತೆ ಮೂಲಕ 7 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಯುವಕ ದೂರು ಸಲ್ಲಿಸಿದ್ದರು. ದುಬೈಗೆ ಪರಾರಿಯಾಗಿದ್ದ ಅಹಮ್ಮದ್ ಅಸ್‌ಬಾಕ್ ವಿರುದ್ಧ ಲುಕೌಟ್ ನೋಟೀಸ್ ಜಾರಿಗೊಳಿಸಲಾಗಿತ್ತು. ಅಲ್ಲಿಂದ ವಾಪಸಾಗುವಾಗ ಈತನನ್ನು ಬಂಧಿಸಲಾಗಿದೆ.