ರಾಮನಗರ: ಆನ್‌ಲೈನ್ ಮೂಲಕ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸುವ ಆಸೆ ತೋರಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಪ್ರಕರಣ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ.
ಚನ್ನಪಟ್ಟಣ ತಾಲೂಕು ಚಕ್ಕಲೂರು ಗ್ರಾಮದ ರೀನಾ ಹಣ ಕಳೆದುಕೊಂಡವರು. ಮೊಬೈಲ್‌ಗೆ ಬಂದ ಟೆಲಿಗ್ರಾಮ್ ಸಂದೇಶವನ್ನು ನಂಬಿ ಆರಂಭದಲ್ಲಿ ಕಡಿಮೆ ಹಣ ಹೂಡಿಕೆ ಮಾಡಿದ್ದಾರೆ. ಆರಂಭದಲ್ಲಿ ವಂಚಕರು ಲಾಭಾಂಶವನ್ನು ನೀಡುವ ಮೂಲಕ ನಂಬಿಕೆ ಹುಟ್ಟುವಂತೆ ಮಾಡಿ ನಂತರ ಹೆಚ್ಚಿಗೆ ಹಣ ಹೂಡಿಸಿದ್ದಾರೆ.
ಇದನ್ನು ನಂಬಿದ ರೀನಾ ಹಂತ ಹಂತವಾಗಿ ಒಟ್ಟು 8.14 ಲಕ್ಷ ರೂ. ಗಳನ್ನು ಬ್ಯಾಂಕ್ ಖಾತೆ ಮೂಲಕ ಹೂಡಿಕೆ ಮಾಡಿದ್ದಾರೆ. ಇದರಿಂದ ಅವರು 13 .11 ಲಕ್ಷ ರೂ. ಲಾಭ ನಿರೀಕ್ಷೆ ಮಾಡಿದ್ದರು. ಆದರೆ, ಬ್ಯಾಂಕ್‌ನಲ್ಲಿ ಹಣವನ್ನು ಡ್ರಾ ಮಾಡಲು ಸಾಧ್ಯವಾಗಿರಲಿಲ್ಲ. ನಂತರ ಮತ್ತೆ ಹಣ ಹೂಡಿಕೆ ಮಾಡುವಂತೆ ಒತ್ತಡ ಹಾಕಿದ್ದರಿಂದ ಅನುಮಾನಗೊಂಡ ರೀನಾ ರಾಮನಗರ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.