ಮಂಡ್ಯ: ಮದ್ದೂರಿನ ನಳಂದ ವಿದ್ಯಾಪೀಠ ಟ್ರಸ್ಟ್ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿರುವ ತಮಗೆ ಪಿಎಫ್ ಸೌಲಭ್ಯ ಕಲ್ಪಿಸದೆ ಅನ್ಯಾಯ ಮಾಡಲಾಗಿದೆ. ಈ ಬಗ್ಗೆ ಶಾಸಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಇನ್ನು 15 ದಿನಗಳಲ್ಲಿ ನಮ್ಮ ಖಾತೆಗೆ ಹಣ ಹಾಕದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಶಾಲೆಯ ಮಾಜಿ ನೌಕರರು ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ನೌಕರರಾದ ಎನ್.ಪಿ.ಸೌಮ್ಯ, ಎಂ.ಎಸ್.ನಂದಿನಿ, ಪಿಎಫ್ ಸೌಲಭ್ಯ ಕೇಳಿದ ಕಾರಣಕ್ಕಾಗಿ ತಮ್ಮನ್ನೆಲ್ಲ ಕೆಲಸದಿಂದ ತೆಗೆದು ಹಾಕಲಾಗಿದೆ. ಕೆಲವರು ಬೇಸತ್ತು ಕೆಲಸ ಬಿಟ್ಟಿದ್ದಾರೆ. ಆದರೆ, 2019ರಿಂದ 2022ರವರೆಗೆ ತಮ್ಮ ಪಿಎಫ್ ಖಾತೆಗೆ ಹಾಕಬೇಕಿರುವ ಹಣವನ್ನು ಹಾಕಬೇಕೆಂಬುದು ತಮ್ಮ ಪ್ರಮುಖ ಬೇಡಿಕೆ. ಅದನ್ನು ಈಡೇರಿಸಲು ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಶಾಲೆಯ ವಿವಿಧ ಹುದ್ದೆಗಳಲ್ಲಿ ಹಲವಾರು ವರ್ಷಗಳಿಂದ ನಾವು ಕೆಲಸ ಮಾಡಿದ್ದೇವೆ. ಕೆಲವರು 5 ವರ್ಷ, ಉಳಿದವರು 10 ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡಿ, ಈಗ ಶಾಲೆಯ ಕೆಲಸ ಬಿಟ್ಟಿದ್ದೇವೆ. 2016ರಲ್ಲಿ ತಮಗೆ ಮೊದಲು ಪಿಎಫ್ ಸೌಲಭ್ಯ ಕಲ್ಪಿಸಲಾಗಿತ್ತು. ಅದರಂತೆ 2019ರವರೆಗೆ ಸೌಲಭ್ಯ ಮುಂದುವರೆಸಲಾಗಿತ್ತು. ಈ ಅವಧಿಯಲ್ಲೂ 11 ತಿಂಗಳ ಮೊತ್ತವನ್ನು ತಮ್ಮ ಖಾತೆಗೆ ಹಾಕಿಲ್ಲ. ಇದೀಗ ಸಂಸ್ಥೆಯ ಆಡಳಿತ ಮಂಡಳಿಯವರ ನಡುವಿನ ಭಿನ್ನಾಭಿಪ್ರಾಯದಿಂದಾಗಿ 2019ರಿಂದ 2022ರವರೆಗೆ ಬಹುತೇಕ ನೌಕರರಿಗೆ ಒಂದು ತಿಂಗಳು ಸಹ ಖಾತೆಗೆ ಹಣ ಹಾಕಿಲ್ಲ. ಈ ಬಗ್ಗೆ ಸಂಸ್ಥೆಯ ಅಧ್ಯಕ್ಷ, ಖಜಾಂಚಿ, ಕಾರ್ಯದರ್ಶಿ ಸೇರಿದಂತೆ ಶಾಸಕ ಕೆ.ಎಂ.ಉದಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.
ಪಿಎಫ್ ಹಣವೇ ನಮಗೆ ಜೀವನದಲ್ಲಿ ಉಳಿತಾಯದ ಮೊತ್ತ. ಈ ಹಣವನ್ನೂ ಕಸಿದುಕೊಂಡರೆ ನಾವು ಹೇಗೆ ಬದುಕುವುದು?. ಪಿಎಫ್ ಹಣಕ್ಕಾಗಿ ಮನವಿ ಸಲ್ಲಿಸಿ ಸಾಕಾಗಿದೆ. ಈಗ ಪ್ರತಿಭಟನೆಯೊಂದೇ ನಮ್ಮ ಮುಂದಿರುವ ಏಕೈಕ ಮಾರ್ಗ. 15 ದಿನಗಳಲ್ಲಿ ಪಿಎಫ್‌ನ ಬಾಕಿ ಮೊತ್ತವನ್ನು ಕೊಡದಿದ್ದರೆ ಶಾಲೆಯ ಅಥವಾ ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಮಾಜಿ ನೌಕರರಾದ ವಿಜಯಮ್ಮ, ಅಪ್ಪಾಜಯ್ಯ, ಸರೋಜ, ಪ್ರತಾಪ್, ಚನ್ನೇಗೌಡ, ಜ್ಯೋತಿ ಇತರರಿದ್ದರು.