ದಾಂಡೇಲಿ: ಕಾನೂನಿಗೆ ವಿರುದ್ಧವಾಗಿ ಮರು ಖರೀದಿಸಿದ ವ್ಯಕ್ತಿ ಹಾಗೂ ಅದಕ್ಕೆ ಸಹಕರಿಸಿದ ಚಾಲಕ ಸೇರಿ ಬೆಳಗಾವಿ ಜಿಲ್ಲೆಯ ಇಬ್ಬನ್ನು ದಾಂಡೇಲಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಆನಗೋಳದ ನೂರ್ ಅಹಮದ್ ಅಬ್ದುಲ್ ಮಜೀದ್ ನಾಯ್ಕ, ಎಸ್.ವಿ.ರೋಡ್‌ನ ಚಾಲಕ ಕಿಶನ್ ಶ್ರೀಕಾಂತ ಐರೇಕರ್ ಬಂಧಿತರು. ಅವರು ದಾಂಡೇಲಿಯ ದಂಪತಿಯಿಂದ ಮಗು ಖರೀದಿಸಿದ್ದರು. ಮಗುವನ್ನು ಶಿರಸಿಯ ಮಕ್ಕಳ ಕಲ್ಯಾಣ ಸಮಿತಿಯ ಎದುರು ಹಾಜರುಪಡಿಸಲಾಗಿದೆ.
ಸಾಲ ತೀರಿಸಲು ಮಗು ಮಾರಿದರು:
ಹಳೆ ದಾಂಡೇಲಿ ಸಾಮಿಲ್ ರೋಡ್‌ನ ಮಾಹಿನ್ ವಸೀಂ ಚಂಡು ಪಟೇಲ್ ಎಂಬಾಕೆ ಜೂನ್ 17 ರಂದು ಗಂಡು ಮಗುವಿಗೆ ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದರು. ಆದರೆ, ಆಕೆಯ ಮಗುವನ್ನು ಜುಲೈ 8 ರಂದು ಬೆಳಗಾವಿಯ ನೂರ್ ಅಮಹದ್ ಎಂಬುವವರಿಗೆ 3 ಲಕ್ಷ ರೂ.ಗೆ ಮಾರಾಟ ಮಾಡಿದ್ದರು ಎನ್ನಲಾಗಿದೆ. 20 ದಿನದ ಮಗುವನ್ನು ಧಾರವಾಡಕ್ಕೆ ಹೋಗಿ ಮಗುವನ್ನು ಹಸ್ತಾಂತರಿಸಿದ್ದರು. ಅನುಮಾನಗೊಂಡ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ರೇಷ್ಮಾ ಪಾವಸ್ಕರ್ ಶಹರ ಠಾಣೆಗೆ ದೂರು ನೀಡಿದ್ದರು.
ದಾಂಡೇಲಿ ಶಹರ ಠಾಣೆಯ ಪಿಎಸ್‌ಐ ಅಮಿಯ್‌ಸಾಬ್ ಅತ್ತಾವರ, ಕಿರಣ ಪಾಟೀಲ್, ಎಎಸ್‌ಐ ಬಸವರಾಜ ಒಕ್ಕುಂದ, ಹೆಡ್ ಕಾನ್ಸ್ಟೇಬಲ್ ಸಿದ್ರಾಮ ರಾಮರಥ, ಸಿಬ್ಬಂದಿ ಚಂದ್ರಶೇಖರ ಪಾಟೀಲ್, ಜ್ಯೋತಿ ಬಾಳೆಕರ್ ಹಾಗೂ ಚಾಲಕ ಮಹಾಂತೇಶ ಚಾಮಗೌಡ ತಕ್ಷಣ ಕಾರ್ಯ ಪ್ರವೃತ್ತರಾಗಿ ಮಗುವನ್ನು ರಕ್ಷಿಸಿದ್ದಾರೆ.
ಮಾಹಿನ್ ಹಾಗೂ ವಸೀಂ ಚಂಡುಪಟೇಲ್ ದಂಪತಿಗೆ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಸಂಘದ ಸಾಲಗಾರರು ಹಣ ಪಾವತಿಸುವಂತೆ ಕಿರಿಕಿರಿ ಮಾಡುತ್ತಿದ್ದರು ಇದರಿಂದ ಮಗುವನ್ನು ಮಾರಾಟ ಮಾಡಿದ್ದರು ಎಂದು ತಿಳಿದುಬಂದಿದೆ. ಆದರೆ, ದಂಪತಿ ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ.