ಜಿಲ್ಲೆ

ಭ್ರಾತೃತ್ವ, ರಕ್ಷಣಾತ್ಮಕ ಬಾಂಧವ್ಯ ಸದೃಢ

Avinash R

ಮೂಡುಬಿದಿರೆ: ಸಹೋದರ-ಸಹೋದರಿಯರ ನಡುವೆ ಇರುವ ಭ್ರಾತೃತ್ವ, ರಕ್ಷಣಾತ್ಮಕ ಬಾಂಧವ್ಯ ಗಟ್ಟಿಗೊಳಿಸುವ ಮೈತೇಯಿ ಸಂಸ್ಕೃತಿಯ ಪ್ರಮುಖ ಹಬ್ಬ ‘ನಿಂಗೋಲ್ ಚಕೋಬಾ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಸಂಸ್ಥೆಯ ಮಣಿಪುರಿ ವಿದ್ಯಾರ್ಥಿಗಳಿಗೆ ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ ಮೈತೇಯಿ ಸಂಸ್ಕೃತಿಯ ಪ್ರಮುಖ ಹಬ್ಬ ನಿಂಗೋಲ್ ಚಕೋಬಾ ಆಚರಣೆಯಲ್ಲಿ ಮಾತನಾಡಿದರು.

ಮೈತೇಯಿ ಸಂಸ್ಕೃತಿಯುಳ್ಳ ಆಚರಣೆ ಮಾಡುವುದರೊಂದಿಗೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮಣಿಪುರದಲ್ಲಿ 10 ಕುಟುಂಬಗಳಿಗೆ ಅದರಲ್ಲೂ ವಿಶೇಷವಾಗಿ ಅನಾಥ ನಿರಾಶ್ರಿತ ಕುಟುಂಬಗಳಿಗೆ 10,000 ರೂ. ಸಹಾಯಧನದಂತೆ ಒಂದು ಲಕ್ಷ ರೂಪಾಯಿ ನೀಡಲಾಗುವುದು ಎಂದರು.

ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಸ್ಥೆಯ ಹೆಮ್ಮೆಯ ಮಣಿಪುರಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಆಳ್ವಾಸ್(ಸ್ವಾಯತ್ತ) ಕಾಲೇಜು ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಕಾಲೇಜು ಪ್ರಾಂಶುಪಾಲೆ ಡಾ.ವನಿತಾ ಶೆಟ್ಟಿ, ಆಳ್ವಾಸ್ ನಸಿರ್ಂಗ್ ಕಾಲೇಜು ಪ್ರಾಂಶುಪಾಲ ಡಾ.ಯತಿಕುಮಾರ್, ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ರೋಶನ್ ಪಿಂಟೋ ಉಪಸ್ಥಿತರಿದ್ದರು.

ವಿದ್ಯಾರ್ಥಿ ಎಲ್.ಶ್ರೀನಿವಾಸ್ ನಿರೂಪಿಸಿದರು. ನರೇಶ್ ಮೈಬಮ್ ಸ್ವಾಗತಿಸಿದರು.

ನೀಲಾದರ್ ಕರ್ಕೇರ, ಸುಶ್ಮಿತಾ ಮಾರ್ಗದರ್ಶನದಲ್ಲಿ ಮಣಿಪುರಿ ವಿದ್ಯಾರ್ಥಿಗಳಿಗೆ ಕರ್ನಾಟಕದ ಜಾನಪದ ಕಲೆ ವೀರಗಾಸೆ ಕುಣಿತ ತರಬೇತಿ ನೀಡಿ ವಿಶೇಷವಾಗಿ ಪ್ರದರ್ಶನ ನೀಡಿದರು.

ವಿದ್ಯಾರ್ಥಿಗಳು ತಯಾರಿಸಿದ ಮಣಿಪುರಿಯ ರುಚಿಕರವಾದ ಸಾಂಪ್ರದಾಯಿಕ ಖಾದ್ಯಗಳಾದ ಇರೊಂಬಾ, ಓಟಿ, ಎಂಗ್ ತೊಂಬಾ, ಮಣಿಪುರಿ ಖೀರ್, ಚಂಪೂಟ್, ಕಾಂಘೌವನ್ನು ಹಬ್ಬದಲ್ಲಿ ಉಣ ಬಡಿಸಲಾಯಿತು.