ಆರ್.ತುಳಸಿಕುಮಾರ್
ಬೆಂಗಳೂರು: ದಂಡು ಪ್ರದೇಶದಿಂದ ರಿಂಗ್ ರಸ್ತೆ ಹಾಗೂ ವಿಧಾನಸೌಧದತ್ತ ತೆರಳಲು ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಪ್ರೇಜರ್‌ಟೌನ್ ರೈಲ್ವೆ ಕೆಳಸೇತುವೆ ಸ್ಥಳದಲ್ಲಿ ಭಾರಿ ಟ್ರಾಫಿಕ್‌ನಿಂದಾಗಿ ನಿತ್ಯವೂ ವಾಹನ ಸವಾರರು ಹಾಗೂ ಪಾದಚಾರಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.
ಕಿರಿದಾದ ಅಂಡರ್‌ಪಾಸ್‌ನಿಂದಾಗಿ ವಾಹನಗಳ ಸರಾಗ ಸಂಚಾರಕ್ಕೆ ಅಡ್ಡಿಯಾಗಿದೆ. ದಟ್ಟಣೆ ವೇಳೆ ಇಲ್ಲಿನ ಟ್ರಾಫಿಕ್ ಆಮೆ ವೇಗ ಪಡೆದಿರುತ್ತದೆ. ದಶಕಗಳ ಹಿಂದೆ ನಿರ್ಮಿಸಲಾದ ಈ ಕಿರಿದಾದ ಕೆಳಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶವಿರುವ ಕಾರಣ ಎಲ್ಲ ವಾಹನಗಳು ಇಲ್ಲಿಂದಲೇ ತೆರಳಬೇಕಾಗಿದೆ. ಅದರಲ್ಲೂ ಬಸ್, ಟೆಂಪೋನಂತಹ ವಾಹನಗಳ ಸಂಚರಿಸುವಾಗ ಒಂದರ ಹಿಂದೆ ಒಂದರಂತೆ ತೆರಳುವುದು ಅನಿವಾರ್ಯ. ಇದರಿಂದ ಹಿಂದೆ ಬರುವ ವಾಹನಗಳು ನಿಧಾನವಾಗಿಯೇ ಚಲಿಸಬೇಕಾದ ಕಾರಣ ಸಿಗ್ನಲ್‌ನ ಎರಡೂ ಬದಿಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಈ ಸಮಸ್ಯೆಗೆ ಪರಿಹಾರ ಒದಗಿಸಬೇಕಿದ್ದ ಚುನಾಯಿತ ಜನಪ್ರತಿನಿಧಿಗಳು ಗಂಭೀರತೆ ತೋರದ ಕಾರಣ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ಸ್ಥಳೀಯರು ಬೇಸತ್ತಿದ್ದಾರೆ.
ಪುಲಿಕೇಶನಗರ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಈ ಜಂಕ್ಷನ್ ಈ ಭಾಗದ ಪ್ರಮುಖ ರಸ್ತೆಯಾಗಿದೆ. ಇಡೀ ಕ್ಷೇತ್ರದಲ್ಲಿ ನಾಗವಾರ-ಟ್ಯಾನರಿ ರಸ್ತೆ-ಪ್ರೇಜರ್‌ಟೌನ್ ರಸ್ತೆಯೇ ಈ ಭಾಗದ ಸಂಚಾರ ಜೀವನಾಡಿಯಾಗಿದೆ. ಸುಮಾರು 6 ಕಿ.ಮೀ. ಉದ್ದವಿರುವ ಈ ರಸ್ತೆ ರಿಂಗ್ ರೋಡ್‌ನತ್ತ ಹೋಗಿ ಬರಲು ಬಳಕೆಯಲ್ಲಿದೆ. ಆದರೆ, ರಸ್ತೆ ದುಸ್ಥಿತಿಯಿಂದಾಗಿ ಈ ಮಾರ್ಗ ಸವಾರರ ಸ್ನೇಹಿ ಆಗಿಲ್ಲ. ರಸ್ತೆಯ ಉದ್ದಕ್ಕೂ ಗುಂಡಿಗಳು ಬಿದ್ದಿವೆ. ಈ ರಸ್ತೆಗುಂಡಿಗಳ ಮಧ್ಯೆಯೇ ವಾಹನ ಚಾಲಾಯಿಸಬೇಕಾಗಿದೆ. ಕಾಡುಗೊಂಡನಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಪ್ರೇಜರ್‌ಟೌನ್ ಜಂಕ್ಷನ್ ವ್ಯಾಪ್ತಿಯಲ್ಲಿ ಹೆಚ್ಚಿನ ಗುಂಡಿಗಳು ಉಂಟಾಗಿವೆ. ಇವುಗಳಿಂದಾಗಿ ವಾಹನ ಸಂಚಾರ ಹಳಿತಪ್ಪಿದೆ. ಬೆಳಗ್ಗೆ ಹಾಗೂ ಸಂಜೆ ಕಚೇರಿ ಅವಧಿಯಲ್ಲಿ ಈ ಮಾರ್ಗವು ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಜತೆಗೆ ಇಲ್ಲಿನ ವಿವಿಧ ಬಡಾವಣೆಗಳತ್ತ ತೆರಳಲು ಜನರು ವಾಹನ ಮಧ್ಯೆಯೇ ತೂರಿ ಹೋಗಬೇಕಾದ ಸ್ಥಿತಿ ಇದೆ. ದ್ವಿಚಕ್ರವಾಹನ ಹಾಗೂ ಅಟೋಗಳ ಅಧಿಕ ಓಡಾಟವಿರುವ ಈ ರಸ್ತೆಯಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರು ಜೀವವನ್ನು ಕೈಯಲ್ಲಿ ಹಿಡಿದು ನಡೆದುಹೋಗಬೇಕಾಗಿದೆ. ತುರ್ತಾಗಿ ತೆರಳಬೇಕಾದ ಆಂಬುಲೆನ್ಸ್ ವಾಹನಗಳು ಇಲ್ಲಿನ ಟ್ರಾಫಿಕ್‌ನಲ್ಲಿ ಸಿಲುಕುವ ಪ್ರಕರಣಗಳು ನಿತ್ಯವೂ ವರದಿಯಾಗುತ್ತಿದ್ದರೂ, ಸಂಚಾರ ಪೊಲೀಸರು ಯಾವುದೇ ಉಪಕ್ರಮ ಕೈಗೊಂಡಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಕಾಮಗಾರಿಯಿಂದ ಟ್ರಾಫಿಕ್ ಹೆಚ್ಚಳ:
ಕಿರಿದಾದ ಅಂಡರ್‌ಪಾಸ್ ಸಮಸ್ಯೆಗೆ ಮುಕ್ತಿ ನೀಡಲು ಇತ್ತೀಚಿಗೆ ಹಳೇ ಕೆಳಸೇತುವೆ ಬದಿಯಲ್ಲೇ ಹೊಸದಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸಿಗ್ನಲ್ ಬಳಿ ಟನಲ್ ನಿರ್ಮಿಸಲಾಗಿದೆ. ಪಾಟರಿಟೌನ್ ರಸ್ತೆ ಮೂಲಕ ಪ್ರೇಜರ್‌ಟೌನ್, ಶಿವಾಜಿನಗರದತ್ತ ತೆರಲು ಮುಕ್ತ ಎಡತಿರುವು ಇರುವಂತೆ 2 ಪಥದ ಟನಲ್ ಕೆಲಸ ಪ್ರಗತಿಯಲ್ಲಿದೆ. ಮುಕ್ತ ಎಡತಿರುವಿನ ರಸ್ತೆಯನ್ನು ಹೊಸದಾಗಿ ನಿರ್ಮಿಸುತ್ತಿರುವುದರಿಂದ ಹಾಲಿ ಕಡಿಮೆ ವಿಸ್ತೀರ್ಣವುಳ್ಳ ಮಾರ್ಗದಲ್ಲೇ ತೆರಳಬೇಕಿದೆ. ಸಿಗ್ನಲ್ ಬಿದ್ದಾಗ ದ್ವಿಚಕ್ರ ವಾಹನ ಸವಾರರು ಪೊಲೀಸರ ಕಣ್ತಪ್ಪಿಸಿ ಎಲ್ಲೆಂದರಲ್ಲಿ ನುಗ್ಗುವುದರಿಂದ ಇತರ ವಾಹನಗಳಿಗೆ ಅಡ್ಡಿಯಾಗುತ್ತಿದೆ. ಇಂತಹವರ ವಿರುದ್ಧ ಟ್ರಾಫಿಕ್ ಪೊಲೀಸ್ ಕ್ರಮ ಜರುಗಿಸುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಜತೆಗೆ ಮಳೆ ಬಂದಾಗ ಇಳಿಜಾರಿನಲ್ಲಿರುವ ಈ ಜಂಕ್ಷನ್ ನೀರಿನಿಂದ ಆವೃತವಾಗಿ ಸಂಚಾರಕ್ಕೆ ಬಾರಿ ತೊಂದರೆ ಉಂಟಾಗುತ್ತಿದೆ ಎಂದು ಸವಾರರು ದೂರಿದ್ದಾರೆ.
ಫ್ರೇಜರ್‌ಟೌನ್ ಜಂಕ್ಷನ್ ಸಮಸ್ಯೆಗೆ ಮುಕ್ತಿ ಹೇಗೆ?:
* ನಾಗವಾರ-ಟ್ಯಾನರಿ ರಸ್ತೆ ಅಗಲೀಕರಣಗೊಳಿಸುವುದು
* ಎಂ.ಎಂ.ರಸ್ತೆ, ನೇತಾಜಿ ರಸ್ತೆಗಳ ಸುಧಾರಣೆ ಮಾಡುವುದು
* ರೈಲ್ವೆ ಅಂಡರ್‌ಪಾಸ್ ಬಳಿ ಮಳೆನೀರು ನಿಲ್ಲದಂತೆ ಪ್ರತ್ಯೇಕ ಚರಂಡಿ ನಿರ್ಮಾಣ
* ಜಂಕ್ಷನ್ ಸುತ್ತ ಟ್ರಾಫಿಕ್ ನಿಯಮ ಕಟ್ಟುನಿಟ್ಟಾಗಿ ಜಾರಿ ಮಾಡುವುದು
* ಪಾಟರಿಟೌನ್ ರಸ್ತೆ, ಬೋರ್‌ಬ್ಯಾಂಕ್ ರಸ್ತೆಯಲ್ಲಿ ಟ್ರಾಫಿಕ್ ಸುಧಾರಣೆ
* ಟ್ಯಾನರಿ ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧಿಸಿ ಸರಾಗ ವಾಹನ ಸಂಚಾರಕ್ಕೆ ಅವಕಾಶ.
ಟ್ಯಾನರಿ ರೋಡ್‌ನಲ್ಲಿ ಸಂಚಾರ ದಟ್ಟಣೆ ಸಾಕಷ್ಟಿದೆ. ಕಿರಿದಾದ ರಸ್ತೆ ಹಾಗೂ ರೈಲ್ವೆ ಅಂಡರ್‌ಪಾಸ್‌ನಿಂದಾಗಿ ಇಲ್ಲಿನ ನಿವಾಸಿಗಳು ತುರ್ತಾಗಿ ತೆರಳಲು ಕಷ್ಟವಾಗುತ್ತಿದೆ. ವಾಹನಗಳ ಸಾಂದ್ರತೆಗೆ ಅನುಗುಣಮವಾಗಿ ರಸ್ತೆ ಅಗಲೀಕರಣ ಹಾಗೂ ರೈಲ್ವೆ ಕೆಳಸೇತುವೆ ಬಳಿ ಇನ್ನಷ್ಟು ಸುಧಾರಣೆ ಅತ್ಯಗತ್ಯ.
- ಮುರುಗೇಶ್, ಡಿ.ಜೆ.ಹಳ್ಳಿ ನಿವಾಸಿ
ರಿಂಗ್ ರೋಡ್‌ಗೆ ತೆರಳು ಫ್ರೇಜರ್‌ಟೌನ್ ಅಂಡರ್‌ಪಾಸ್ ಮೂಲಕವೇ ತರಳಬೇಕು. ಮಳೆ ಬಂದಾಗ ಅಥವಾ ಮಳೆ ಸುರಿದಾಗ ಇಲ್ಲಿನ ಸಮಸ್ಯೆ ಯಾರಿಗೂ ಬೇಡ. ಬಿಬಿಎಂಪಿ, ರೈಲ್ವೆ ಸೇರಿ ಯಾವ ಇಲಾಖೆಯವರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಜನರ ಸಮಸ್ಯೆ ಅರಿತು ಇಲ್ಲಿನ ಜಂಕ್ಷನ್ ಅಭಿವೃದ್ಧಿಪಡಿಸಲಿ.
- ಅಮ್ಜದ್, ಫ್ರೇಜರ್‌ಟೌನ್ ನಿವಾಸಿ