ಜಿಲ್ಲೆ

ರೈತರ ಏಳಿಗೆಗೆ ಎಫ್‌ಪಿಒ ಶ್ರಮಿಸಲಿ

ರಮೇಶ ಮೇಳಕುಂದಾ

ಔರಾದ್ : ಜಿಲ್ಲೆಯಲ್ಲಿ ರೈತರ ಶ್ರೇಯಸ್ಸಿಗಾಗಿ ರಿಲಾಯನ್ಸ್ ಫೌಂಡೇಷನ್ ಸಂಸ್ಥೆ ಸಹಯೋಗದಡಿ ೨೬ ಹಳ್ಳಿ ರೈತ ಸದಸ್ಯರಿಂದಲೇ ಸ್ಥಾಪಿತವಾದ ಬೀದರ್ ಕೃಷಿ ಉತ್ಪಾದಕರ ಸಂಘ (ಎಫ್‌ಪಿಒ) ಉತ್ತಮವಾಗಿ ನಡೆಯುತ್ತಿದ್ದು, ರೈತರ ಏಳಿಗೆಗೆ ಶ್ರಮಿಸಬೇಕು ಎಂದು ಫೌಂಡೇಷನ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಮಚಂದ್ರ ಶೇರಿಕಾರ ಹೇಳಿದರು.
ನಾಗೂರ(ಎನ್)ದಲ್ಲಿ ಗುರುವಾರ ಏರ್ಪಡಿಸಿದ್ದ ಕಂಪನಿಯ ಏಳನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ರೈತಪರ ಕಾಳಜಿ ಒಳಗೊಂಡು ಎಫ್‌ಪಿಒ ರೈತರನ್ನು ಒಟ್ಟುಗೂಡಿಸಿ ಅಗಾಧ ಪ್ರಮಾಣದ ಆರ್ಥಿಕತೆಯ ಪ್ರಯೋಜನ ಪಡೆಯಲು ಸಹಕಾರ ನೀಡುತ್ತಿದೆ. ಸಂಘಟಿತ ವ್ಯವಸ್ಥೆ ಮತ್ತು ಸಂಸ್ಥೆಗಳು ಸಣ್ಣ ಉತ್ಪಾದಕರ ಆದಾಯ ಹೆಚ್ಚಳ, ಸರಕುಗಳಿಗೆ ಉತ್ತಮ ಬೆಲೆ ಕೊಡಿಸಲು ಸಹಾಯ ಮಾಡುತ್ತಿದೆ ಎಂದರು.
ಎಫ್‌ಪಿಒ ನಿರ್ದೇಶಕ ಅಯೂಬ್ ಖಾನ್ ಪಟೇಲ್ ಮಾತನಾಡಿ, ರೈತ ಉತ್ಪಾದಕ ಸಂಘ ಎಲ್ಲ ಷೇರುದಾರರಿಗೆ ಹೆಚ್ಚು ಲಾಭದಾಯಕವಾಗಿಸಲು ಸಹಕರಿಸುತ್ತದೆ. ಹಿಂದುಳಿದ ಸಂಪರ್ಕ, ಉತ್ತಮ ಕೃಷಿ ಪದ್ಧತಿ, ಬೀಜ ಉತ್ಪಾದನೆ, ಮೌಲ್ಯವರ್ಧನೆ, ಬ್ರ್ಯಾಂಡಿಂಗ್​ ಇತ್ಯಾದಿ ಒಳಗೊಂಡಂತೆ ತಮ್ಮ ಅಗತ್ಯ ಕೆಲಸ ನಿರ್ವಹಿಸಲು ತಾಂತ್ರಿಕ ಮತ್ತು ವ್ಯವಸ್ಥಾಪಕ ಪರಿಣತಿ ಪಡೆದಿದೆ. ರೈತ ಸದಸ್ಯರಿಗೆ ಸರಿಯಾದ ಸಮಯ ಮತ್ತು ಕೈಗೆಟುಕುವ ದರದಲ್ಲಿ ವಿವಿಧ ಸೇವೆ ಒದಗಿಸಲು ವ್ಯವಸ್ಥೆ ಬಲಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಪಿಡಿಒ ಚಂದ್ರಕಾಂತ ಸ್ವಾಮಿ, ಗಣಪತಿ ಸಿಂಗಟೆ, ಘಾಳರೆಡ್ಡಿ, ದೇವಿದಾಸರಾವ, ಭಗವಾನ್ ಪಾಟೀಲ್, ಅಮೃತರಾವ ಗಗೋಜೆ, ದಯಾನಂದ ಹಳ್ಳಿಖೇಡೆ, ತುಳಸಿರಾಮ, ಶಂಕರೆಪ್ಪ ಜೈನಾಪುರೆ, ಶಿವರಾಜ ಪಾಟೀಲ್, ಹಣಮಂತ ಮಡಿವಾಳ, ಈಶ್ವರ ಜೈನಾಪುರೆ, ಶಿವಲಿಂಗಯ್ಯ ಸ್ವಾಮಿ, ಸಂಗಪ್ಪ ಅತಿವಾಳ, ಮಹೇಶ ಕಣಜೆ, ಮಾರುತಿ ಕಮಠಾಣ, ಶಿವು ಮಾಡಿವಾಳ ಇತರರಿದ್ದರು. ಸಂಗಮೇಶ ಕೊಡಗೆ ನಿರೂಪಣೆ ಮಾಡಿದರು.