ವಿಜಯವಾಣಿ ಸುದ್ದಿಜಾಲ ಧಾರವಾಡ
ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (ಎಫ್ಪಿಎಐ)ದ 75ನೇ ವಾರ್ಷಿಕೋತ್ಸವ ನಿಮಿತ್ತ ಸ್ಥಳಿಯ ಶಾಖೆ ವತಿಯಿಂದ ಜು. 20ರಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಜು. 30ರವರೆಗೆ ನಡೆಯಲಿವೆ ಎಂದು ಶಾಖಾ ವ್ಯವಸ್ಥಾಪಕಿ ಸುಜಾತ ಆನಿಶೆಟ್ಟರ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು. 23ರಂದು ಬೆಳಗ್ಗೆ 6.15ಕ್ಕೆ ಕೆಸಿಡಿ ಕಾಲೇಜಿನಿಂದ ವಾಕಥಾನ್, ಜು. 24ರಂದು ಮಧ್ಯಾಹ್ನ 3.30ಕ್ಕೆ ಯುವಕರಿಗೆ ಶ್ರೀನಗರ ವೃತ್ತದಿಂದ ಬೈಕ್ ಜಾಥಾ, ನರೇಂದ್ರ ಹಾಗೂ ಶಿರಕೋಳದಲ್ಲಿ 75 ಜನ ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ ಎಂದರು.
ಜು. 25ರಂದು ನರೇಂದ್ರ ಗ್ರಾಮದಲ್ಲಿ ಬೆಳಗ್ಗೆ 11 ಗಂಟೆಗೆ ಸೈಕಲ್ ಜಾಥಾ, ಜು. 26ರಂದು ಬೆಳಗ್ಗೆ 10 ಗಂಟೆಗೆ ಬಸವರೆಡ್ಡಿ ಶಾಲೆಯಲ್ಲಿ ಮುಟ್ಟಿನ ಆರೋಗ್ಯ ನಿರ್ವಹಣೆ ಕುರಿತು ಉಪನ್ಯಾಸ, ಜು. 27ರಂದು ಬೆಳಗ್ಗೆ 11 ಗಂಟೆಗೆ ಮುಳಮುತ್ತಲ ಗ್ರಾಮದಲ್ಲಿ ಹೆಣ್ಣು ಮಕ್ಕಳಿಗೆ ಎಚ್ಪಿವಿ ಲಸಿಕೆ ನೀಡಲಾಗುವುದು. ಜು. 30ರಂದು ಸಂಜೆ 5 ಗಂಟೆಗೆ ಆಲೂರು ವೆಂಕಟರಾವ್ ಭವನದಲ್ಲಿ ವೈದ್ಯರಿಗೆ, ವೈದ್ಯಕಿಯ ಸಿಬ್ಬಂದಿ ಹಾಗೂ ಸ್ವಯಂ ಸೇವಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದರು.
ಸಂಸ್ಥೆಯ ಪೋಷಕ ಡಾ. ರಾಜನ್ ದೇಶಪಾಂಡೆ ಮಾತನಾಡಿ, ಧನ್ವಂತಿ ರಾಮರಾವ್ ಮತ್ತು ಅವ್ವಬಾಯಿ ವಾಡಿ ಎಂಬ ಮಹಿಳೆಯರಿಂದ ಆರಂಭವಾದ ಎಫ್ಪಿಎಐ, ದೇಶಾದ್ಯಂತ ಸುಮಾರು 40 ಶಾಖೆಗಳನ್ನು ಹೊಂದಿದೆ. ಎಲ್ಲ ಶಾಖೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗರ್ಭಕಂಠದ ಕ್ಯಾನ್ಸರ್ ತಡೆಗಾಗಿ ಸಂಸ್ಥೆ ವತಿಯಿಂದ ಈಗಾಗಲೇ ಎಚ್ಪಿವಿ ಲಸಿಕೆಗಳನ್ನು ನೀಡಲಾಗುತ್ತಿದೆ. ಇದೊಂದು ಮಹತ್ತರ ಕೆಲಸವಾಗಿದೆ. ಇದಲ್ಲದೆ ಇಡೀ ರಾಜ್ಯದಲ್ಲಿ 1 ಲಕ್ಷ ಯುವತಿಯರಿಗೆ ಲಸಿಕೆ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.